Saturday, October 4, 2008

ಅಭಿವೃದ್ಧಿಯ ಫಲ ಕೊಟ್ಟಕೊನೆಯವನಿಗೂ ಸಿಗುವಂತಾದರೆ ಸಾರ್ಥಕ


ಗೋಕರ್ಣ, ಅ.೨ - ಅಭಿವೃದ್ಧಿ ಎಂದರೆ ಸಮಾಜದ ಎಲ್ಲ ಸ್ತರಗಳ ಸರ್ವತೋಮುಖ ಉನ್ನತಿ. ಅದರ ಫಲ ಸಮಾಜದ ಕೊಟ್ಟಕೊನೆಯವನಿಗೂ ಸಿಗುವಂತಾದರೆ ಸಾರ್ಥಕ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ಬಿಜ್ಜೂರಿನ ಗ್ರಾಮ ಸಂಪರ್ಕ ಸಭೆಯಲ್ಲಿ ಶ್ರೀಗಳು ಸಾಮಾಜಿಕ ಕಾರ್ಯಗಳ ಫಲ ಕೆಲವೇ ಕೆಲವು ಮಂದಿಗೆ ಸೀಮಿತವಾಗದೇ ಎಲ್ಲರಿಗೂ ಹಂಚಿಕೆಯಾಗುವಂತೆ ಆಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು ಎಂದರು.

ಇಲ್ಲಿನ ಹಾಲಕ್ಕಿ ಸಮುದಾಯ ಗೋ ಸದೃಶವಾದದ್ದು. ವಂಚನೆ, ಕಪಟ, ಮೋಸ ಯಾವೊಂದನ್ನೂ ಅರಿಯದ ಮುಗ್ಧ ಜನ ಹಾಲಕ್ಕಿಗಳು. ಆರ್ಥಿಕವಾಗಿಯೂ ತೀರಾ ಹಿಂದುಳಿದಿದ್ದಾರೆ. ಇದರ ಬಗೆಗೆ ಅವರಲ್ಲಿ ಕೀಳರಿಮೆ ಉಂಟಾಗದಂತೆ ಎಚ್ಚರವಹಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ, ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ಅವರಿಗೆ ೧೦೦೦ ಹಸುಗಳನ್ನು ದಾನವಾಗಿ ಕೊಡಮಾಡಲಾಗುವುದು ಎಂದು ಘೋಷಿಸಿದರು ಮತ್ತು ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

ಮಥನವಾಗದೇ ಬೆಣ್ಣೆ ಬರುವುದಿಲ್ಲ. ದೇವಾಲಯ ಹಸ್ತಾಂತರವಾದಾಗ ಪರ-ವಿರೋಧ ನಿಲುವುಗಳ ವ್ಯಕ್ತವಾದವು. ಅದರಿಂದ ಇಂದು ವಾಸ್ತವದ ಅಮೃತ ಸದೃಶ ಬೆಣ್ಣೆ ಮೂಡುತ್ತಿದೆ. ಇನ್ನೈದು ವರ್ಷಗಳಲ್ಲಿ ಗೋಕರ್ಣದ ಚಹರೆಯೇ ಬದಲಾಗಲಿದೆ ಎಂದು ಹೇಳಿದರು.

ಹೊಸಾಡ ಗೋಬ್ಯಾಂಕಿನ ಅಧ್ಯಕ್ಷ ಮುರಳೀಧರ ಪ್ರಭು ಗೋ ಸಾಕಾಣಿಕೆಯ ಮಹತ್ವದ ಕುರಿತಾಗಿ ನಾಲ್ಕು ಮಾತುಗಳನ್ನಾಡಿದರು. ತಾಳಸು ಗೌಡ, ಗೋವಿಂದ ಮ. ಗೌಡ, ಮಾಸ್ತಿ ಅಗೇರ, ಜಯ ಗೌಡ, ಗಂಗೆ ಬೋಳು ಗೌಡ ಮೊದಲಾ ಪುರ ಪ್ರಮುಖರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಗೋವಿಂದ ಮಂಕಾಳ ಗೌಡ ಸ್ವಾಗತಿಸಿದ ಸಭೆಯನ್ನು ಮಂಜುನಾಥ ಜಿ. ಭಟ್ಟರು ನಿರ್ವಹಿಸಿದರು.

1 comment:

Unknown said...

wow.olle kelasa akta ide. ravi KARIGERE ge e news odalu heli.