ಜನಸಾಗರದೆದುರು ರಾಘವೇಶ್ವರ ಶ್ರೀಗಳ ಘೋಷಣೆ *ದೇವರ ದರ್ಶನಕ್ಕೆ ಪ್ರವೇಶ ಶುಲ್ಕ ಇಲ್ಲ *ಮುಟ್ಟಿ ಪೂಜಿಸುವ ಪದ್ಧತಿ ಮುಂದುವರಿಯುತ್ತದೆ *ಭಕ್ತರು, ಅರ್ಚಕರಿಗೆ ಭಯ ಬೇಡ *ದೇವರ ಅಷ್ಟ ಬಂಧಕ್ಕೆ ಯೋಜನೆ *ಹಸ್ತಾಂತರ ಮಹಾಬಲೇಶ್ವರನ ಇಚ್ಛೆ
(ಆತ್ಮಲಿಂಗವೇದಿಕೆ) ಗೋಕರ್ಣ: ‘ಮಹಾಬಲೇಶ್ವರ ದೇವಸ್ಥಾನವನ್ನು ಇಡೀ ಸಮುದಾಯಕ್ಕೆ ಹಸ್ತಾಂತರ ಮಾಡುತ್ತಿದ್ದೇನೆ. ಇದು ಯಾವುದೇ ಜಾತಿ ಹಾಗೂ ಸಮುದಾಯಕ್ಕೆ ಸೀಮಿತವಾಗುವುದಿಲ್ಲ. ಇದು ಇಡೀ ಸಮುದಾಯದ್ದಾಗುತ್ತದೆ. ಇಲ್ಲಿಯ ಎಲ್ಲ ಸಂಪ್ರದಾಯ, ಪದ್ಧತಿಗಳು, ಆಚಾರ ಹಾಗೆಯೇ ಮುಂದುವರಿಯುತ್ತವೆ. ಇದು ಗೋಕರ್ಣ ಮಂಡಲಾಶ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಘೋಷಣೆ. ಗೋಕರ್ಣದ ಸಾಗರ ತೀರದ ಭದ್ರಕಾಳಿ ಕಾಲೇಜಿನ ಆತ್ಮಲಿಂಗ ವೇದಿಕೆಯಲ್ಲಿ ಸೋಮವಾರ ನೆರೆದಿದ್ದ ಜನಸಾಗರದೆದುರು ಶ್ರೀಗಳಿಂದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾಸಂಕಲ್ಪ ಘೋಷಣೆ ಮೊಳಗುತ್ತಿದ್ದಂತೆಯೇ ಎಲ್ಲರಲ್ಲೂ ರೋಮಾಂಚನ. ‘ಗೋಕರ್ಣದ ಆತ್ಮಲಿಂಗವನ್ನು ಮುಟ್ಟಿಪೂಜೆ ಮಾಡುವ ಪದ್ಧತಿ ಮುಂದುವರಿಯಲಿದೆ. ಮಠ, ಭಕ್ತರು ಹಾಗೂ ಭಗವಂತನ ಮಧ್ಯೆ ದ್ವಾರ ಆಗತ್ತದೆಯೇ ವಿನಃ ಗೋಡೆ ಆಗುವುದಿಲ್ಲ. ಭಕ್ತರ ಪೂಜೆ ಆಗಬೇಕು ಎಂಬುದು ಮಠದ ಅಪೇಕ್ಷೆ ಅಂದರೆ ಇಲ್ಲಿಗೆ ಬಂದ ಭಕ್ತರು ತೃಪ್ತ ಭಾವದಿಂದ ಹೋಗುವಂತಾಗಬೇಕು’ ಎಂದರು. ಇನ್ನು ಮುಂದೆ ದೇವರ ದರ್ಶನಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಘೋಷಿಸಿದ ರಾಘವೇಶ್ವರ ಶ್ರೀಗಳು, ಆತ್ಮ ಲಿಂಗ ಹಾಗೂ ಭಕ್ತರ ಮಧ್ಯೆ ಸಣ್ಣ ತಡೆಯೂ ಇಲ್ಲ ಎಂಬುದು ಇದರ ಸಂಕೇತ. ಅಂದರೆ ಮಠ ಯಾವತ್ತೂ ಭಕ್ತರು ಹಾಗೂ ಭಗವಂತನ ನಡುವಿನ ಸಂಬಂಧಕ್ಕೆ ಅಡ್ಡಿಯಾಗುವುದಿಲ್ಲ ಎಂದರು. ಪೂಜಾ ಪದ್ಧತಿ ಹಾಗೆಯೇ ಮುಂದುವರಿಯಲಿದೆ. ಯಾರದ್ದಾದರೂ ಬಿಟ್ಟು ಹೋಗಿದ್ದರೆ ಇದನ್ನು ಸೇರಿಸುವ ಕೆಲಸವನ್ನು ಮಠ ಮಾಡುತ್ತದೆ. ಭಕ್ತರು, ಅರ್ಚಕರು, ಇತರ ಸಂಬಂಧಪಟ್ಟವರ ಯಾರೂ ಈ ಬಗ್ಗೆ ಭಯಪಡಬೇಕಾಗಿಲ್ಲ ಎಂದರು. ಗೋಕರ್ಣದ ಅಷ್ಟ ಬಂಧವಾಗಿ ೨೫ ವರ್ಷಗಳು ಕಳೆದಿವೆ, ಹೀಗಾಗಿ ಅಷ್ಟಬಂಧ ಕಾರ್ಯಕ್ರಮ ಮಾಡಬೇಕಾಗಿದೆ ಎಂದರು. ಎಷ್ಟೇ ಆಕ್ರಮಣಗಳು ನಡೆದರೂ ಗೋಕರ್ಣ ಮಹಾಬಲೇಶ್ವರ ಅಚಲನಾಗಿಯೇ ಇದ್ದಾನೆ. ಆತನನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ರಾಮಚಂದ್ರಾಪುರ ಮಠ ಸಹ ಅನೇಕ ಆಕ್ರಮಣಗಳನ್ನು ಎದುರಿಸಿಯೂ ಅಚಲವಾಗಿಯೇ ಇದೆ, ಅಚಲವಾಗಿಯೇ ಇರುತ್ತದೆ ಎಂದರು. ಆತ್ಮಲಿಂಗದ ಪೂಜೆಗೆ ದೇಶದ ಯಾವುದೇ ಪೀಠಕ್ಕೆ ಹಾಗೂ ಪೀಠಾಪತಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಎಲ್ಲರಿಗೂ ಸ್ವಾಗತವಿದೆ, ಕೇವಲ ಸ್ವಾಗತವಲ್ಲ, ಅದ್ಧೂರಿ ಸ್ವಾಗತವಿದೆ ಎಂದರು. ಮಹಾಬಲೇಶ್ವರನ ಇಚ್ಛೆ ಇಲ್ಲದಿದ್ದರೆ ಇಲ್ಲಿ ಏನೂ ಆಗುವುದಿಲ್ಲ, ಆತ ಎಷ್ಟೇ ಬಲಶಾಲಿಯಾಗಿದ್ದರೂ ಏನು ಮಾಡಲೂ ಸಾಧ್ಯವಿಲ್ಲ. ಇದಕ್ಕೆ ರಾವಣನೇ ಉದಾಹರಣೆ. ಶ್ರೀ ಮಠಕ್ಕೆ ಮಹಾಬಲೇಶ್ವರನ ದೇವಸ್ಥಾನವನ್ನು ವಹಿಸಲಾಗಿದೆ ಎಂದರೆ ಇದು ಆತನ ಇಚ್ಛೆ ಎಂದರ್ಥ ಎಂದರು. ಗೋಕರ್ಣ ಎಂದರೆ ಗೋವುಗಳ ವಿಚಾರವನ್ನು ಸದಾ ಜನರ ಕಿವಿಯಲ್ಲಿಡಬೇಕು ಎಂದರ್ಥ. ರಾಮಚಂದ್ರಾಪುರ ಮಠ ಇದೇ ಕೆಲಸ ಮಾಡುತ್ತಿದೆ. ಮಠಕ್ಕೆ ಗೋಕರ್ಣ ದೇವಸ್ಥಾನ ವಹಿಸಿದ್ದು ಮಗು ಪುನಃ ಮನೆಗೆ ಬಂದಂತಾಗಿದೆ. ಇಲ್ಲಿ ಮಹಾಬಲೇಶ್ವರ ತಾಯಿ, ರಾಮಚಂದ್ರಾಪುರ ಮಠ ಮಗು. ಮಗು ಈಗ ಮನೆಗೆ ಬಂದಿದೆ, ಇದನ್ನು ಯಾಕೆ ಎಂದು ಕೇಳುತ್ತಾರಾ ಎಂದು ಪ್ರಶ್ನಿಸಿದರು.
No comments:
Post a Comment