Tuesday, September 23, 2008

ಅಷ್ಟರಿಗಿಂತ ಕನಿಷ್ಠರಾಗುವುದು ಬೇಡ...!

ಮಠ ಮಂದಿರಗಳ ಸಮರಕ್ಕೊಂದು ಉತ್ತಮ ಉದಾಹರಣೆ ಕೊಡಿ... ಹಾಗೊಂದು ಪ್ರಶ್ನೆ ಕೇಳಿದರೆ ಚಿಕ್ಕ ಮಗುವೂ ಉಡುಪಿಯ ಅಷ್ಟ ಮಠದತ್ತ ಕೈ ಮಾಡಿ ತೋರಿಸುತ್ತದೆ!


ಸಮಾಜದಲ್ಲಿರುವ ಎರಡು ಹವ್ಯಕ ಮಠಗಳು ಅಂತಹದ್ದೊಂದು ಕದನಕ್ಕೆ ಸಜ್ಜಾಗಿ ನಿಂತಿವೆಯಾ ? ಗೋಕರ್ಣ ವಿವಾದವೆಂಬುದು ಕದನಕ್ಕೊಂದು ನೆವವಾಯಿತಾ ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ. ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿಗಳು ಬಹಿರಂಗ ಕಹಳೆ ಊದಿರುವುದೇ ಇಂತಹದ್ದೊಂದು ಆಂತಕಕ್ಕೆ ಕಾರಣ ಎನ್ನಬಹುದು.


‘ಹಸ್ತಾಂತರಕ್ಕೆ ಹವ್ಯಕ ಮಠದಿಂದಲೇ ವಿರೋಧ’ ಕೆಲ ದಿನಗಳ ಹಿಂದೆ ದಿನಪತ್ರಿಕೆಗಳಲ್ಲಿ ರಾರಾಜಿಸಿದ ಸಾಲಿದು. ರೋಗಿ ಬಯಸಿದ್ದು ಅದೇ, ವೈದ್ಯ ಕೊಟ್ಟಿದ್ದೂ ಅದೇ ಎಂಬಂತಾಯಿತು ಕೆಲ ಸಮುದಾಯದವರಿಗೆ, ಸ್ವರ್ಣವಲ್ಲಿ ಶ್ರೀಗಳ ಹೇಳಿಕೆ. ಹಾಗಂತ ಅವರು ತಮ್ಮ ವಿರೋಧಕ್ಕೆ ಇಂತಹದ್ದೇ ಎನ್ನಬಹುದಾದ ನಿರ್ದಿಷ್ಟ ಕಾರಣ ಕೊಡಲಿಲ್ಲ! ಗೋಕರ್ಣ ಉತ್ತರ ಕನ್ನಡ ಜಿಲ್ಲೆಯದ್ದು. ಅಲ್ಲಿ ರಾಮಚಂದ್ರಾಪುರ ಮಠದ ಸವಾರಿ ಬರಬಾರದೆಂಬ ಉದ್ದೇಶವಿರಬಹುದು! ಅದೇನೆ ಇರಬಹುದು, ಈಗ ಗೋಕರ್ಣ ವಿಚಾರಕ್ಕೆ ಪ್ರವೇಶಿಸಿರುವ ಸ್ವರ್ಣವಲ್ಲಿ ಶ್ರೀಗಳು, ಕಾಲುಬುಡದಲ್ಲೇ ಇರುವ ಗೋಕರ್ಣದಲ್ಲಿ ನಡೆಯಬಾರದ ಕೃತ್ಯಗಳು ನಡೆಯುತ್ತಾ ಇದ್ದರೂ ಇಷ್ಟು ದಿನಗಳ ಕಾಲ ನೋಡಿಕೊಂಡು ಸುಮ್ಮನಿದ್ದರೇಕೆ ? ಇದ್ದಕ್ಕಿದ್ದ ಹಾಗೆ ಅವರಿಗೆ ಗೋಕರ್ಣದ ಕುರಿತು ಕಾಳಜಿ ಮೂಡಿರುವುದೇಕೆ? ಎಂಬೆಲ್ಲ ಪ್ರಶ್ನೆಗಳು ಅವರ ಹೇಳಿಕೆಯ ಹಿಂದೆಯೇ ಹಬ್ಬಿದೆ.


ಪೀಠಾಪತಿಗಳು ಒಂದು ವಿವಾದವನ್ನು ಪ್ರತಿಷ್ಠೆಯ ವಿಚಾರವನ್ನಾಗಿ ತೆಗೆದುಕೊಂಡು ಗುದ್ದಾಟ ಮಾಡುತ್ತಾರೆ ಎಂಬುದು ನಿಜಕ್ಕೂ ಖೇದಕರ ವಿಚಾರ. ಎರಡು ಕೈ ಸೇರಿದಾಗ ಮಾತ್ರ ಚಪ್ಪಾಳೆಯ ಸದ್ದು ಕೇಳುವುದು ಅನ್ನುತ್ತಾರೆ ಬಲ್ಲವರು. ಅಥವಾ ಅಹಂಕಾರಕ್ಕೆ ಉದಾಸೀನವೇ ಮದ್ದು ಎಂಬ ಧೋರಣೆಯಡಿಯಲ್ಲಾದರೂ ಸರಿ, ಇಲ್ಲಿಯವರೆಗೂ ಒಂದು ಘನತೆ, ಗಂಭೀರತೆಯನ್ನು ಕಾಯ್ದುಕೊಂಡು ಬಂದಿರುವ ರಾಮಚಂದ್ರಾಪುರ ಮಠ ಸ್ವರ್ಣವಲ್ಲಿಯವರ ಮಾತಿಗೆ ಕಿವಿಗೊಡದೇ ಈ ವಿವಾದವನ್ನು ಇಲ್ಲಿಗೆ ಮುಗಿಸಲಿ. ಅಭಿವೃದ್ಧಿಯ ಮಂತ್ರವನ್ನು ಮಾತ್ರ ಪಠಿಸಲಿ. ಹವ್ಯಕ ಸಮುದಾಯದ ಕಲಹ ಬಸ್ ನಿಲ್ದಾಣದಲ್ಲಿ ಜನ ಆಡಿಕೊಳ್ಳುವ ವಸ್ತುವಾಗದಿರಲಿ ಎಂಬುದು ನನ್ನ ಕಳಕಳಿಯ ವಿನಂತಿ.

-ವಿನಾಯಕ
payaniga2005@gmail.com

No comments: