ಗೋಕರ್ಣ :ಭದ್ರಕಾಳಿ ಕಾಲೇಜು ಮೈದಾನದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಪುನರುತ್ಥಾನಕ್ಕೆ ಯೋಗಿವರೇಣ್ಯರ ಸಮ್ಮುಖ ಸುಮಾರು ೬೦ರಿಂದ ೭೦ ಸಾವಿರಕ್ಕೂ ಹೆಚ್ಚಿನ ಭಕ್ತರು ಸೋಮವಾರ ಸಂಜೆ ಪುನರುತ್ಥಾನ ಮಹಾ ಸಂಕಲ್ಪದ ಹೆಜ್ಜೆ ಹಾಕಿದರು. ಭದ್ರಕಾಳಿ ದೇವಸ್ಥಾನದಿಂದ ಸಂಜೆ ೫ಕ್ಕೆ ಆರಂಭವಾದ ಮೆರವಣಿಗೆಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮೆರವಣಿಗೆಯು ಮಹಾಬಲೇಶ್ವರ ದೇವಸ್ಥಾನದವರೆಗೂ ಸಾಗಿತು. ಜಾನಪದ ಕಲೆಗಳ ಮೆರಗು: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಆಸೀನರಾಗಿದ್ದ ‘ಮಹಾನಂದಿ’ ರಥವನ್ನು ಮೆರವಣಿಗೆಯುದ್ದಕ್ಕೂ ಕೊಂಡೊಯ್ಯಲಾಯಿತು. ಕೇರಳದ ಚಂಡೆವಾದನ, ಡೊಳ್ಳುಕುಣಿತ, ಸುಗ್ಗಿ ಕುಣಿತ, ವಾದ್ಯಮೇಳ ಸೇರಿದಂತೆ ಕರಾವಳಿ ಮತ್ತು ಉತ್ತರ ಕರ್ನಾಟಕದ ವೈಶಿಷ್ಟ್ಯ ಬಿಂಬಿಸುವ ಅನೇಕ ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಕೇರಳ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಿಂದಲೂ ನೂರಾರು ವಾಹನಗಳಲ್ಲಿ ಭಕ್ತರು ಆಗಮಿಸಿದ್ದರು. ಭರವಸೆ ನೂರಾರು: ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಹಾಗೂ ಪರಿವಾರ ದೇವತೆಗಳನ್ನು ರಾಜ್ಯ ಸರಕಾರ ಶ್ರೀ ರಾಮಚಂದ್ರಾಪುರ ಮಠಕ್ಕೆ ವಹಿಸಿದ ಬಳಿಕ ನಡೆದ ಈ ಮೊದಲ ಕಾರ್ಯಕ್ರಮ ಭಕ್ತರಲ್ಲಿ ಕ್ಷೇತ್ರ ಪುನರುತ್ಥಾನದ ಭರವಸೆ ಮೂಡಿಸಿತು. ಗೋಕರ್ಣ ಮುಂದೆ ಧಾರ್ಮಿಕ ಮತ್ತು ಪ್ರವಾಸೋದ್ಯಮದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಲಿದೆ. ಶ್ರೀ ಕ್ಷೇತ್ರಕ್ಕೆ ಬಂದವರಿಗೆ ಶಾಂತಿ-ಸಮಾಧಾನ ಸಿಗಲಿದೆ. ಗೋಕರ್ಣ ಎಂದರೆ ಕೇವಲ ಬೀಚ್ ಅಥವಾ ವಿಕೃತಿಯ ತಾಣವಲ್ಲ. ಆತ್ಮಲಿಂಗ ಇರುವ ಗೋಕರ್ಣ, ಮಹಾಬಲೇಶ್ವರನ ಸನ್ನಿಧಾನ ಎಂದೇ ಆಗಬೇಕು. ಈ ಆಶಯದಿಂದಲೇ ಪುನರುತ್ಥಾನ ಮಹಾಸಂಕಲ್ಪ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಬೀದರ್‌ನಿಂದ ಬಂದ ಭಕ್ತರೊಬ್ಬರು ಸೇರಿದಂತೆ ಅನೇಕರು ಹೇಳಿದರು. ಕಾರ್ಯಕ್ರಮ ಎಲ್ಲ ರೀತಿಯಿಂದಲೂ ಸುವ್ಯವಸ್ಥಿತವಾಗಿತ್ತು. ಗೋಕರ್ಣ ಕ್ಷೇತ್ರಾದ್ಯಂತ ತಳಿರು ತೋರಣಗಳ ಶೃಂಗಾರ, ಸ್ವಾಗತಕ್ಕೆ ವಿದ್ಯುದ್ದೀಪಗಳ ಅಲಂಕಾರ. ಮನೆಗಳ ಮುಂದೆ ರಂಗೋಲಿ ಕಂಗೊಳಿಸುತ್ತಿತ್ತು. ಇಡೀ ನಗರವೇ ಸ್ವಚ್ಛ , ಸುಂದgವಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಹವ್ಯಕರು, ನಾಮಧಾರಿಗಳು, ಗೌಡ ಸಾರಸ್ವತರು, ಸಾರಸ್ವತರು, ದೈವಜ್ಞರು, ಹಾಲಕ್ಕಿಗಳು, ಮೀನುಗಾರರು, ಮಡಿವಾಳರು, ಪಟಗಾರರು, ಪರಿಶಿಷ್ಟರು ಸೇರಿದಂತೆ ಎಲ್ಲ ಸಮುದಾಯಗಳಿಂದಲೂ ಜನ ಆಗಮಿಸಿದ್ದರು. ಎಲ್ಲರೂ ಗೋಕರ್ಣ ಧಾರ್ಮಿಕವಾಗಿಯೇ ಜಗತ್ತಿನಾದ್ಯಂತ ಪ್ರಸಿದ್ಧವಾಗಿ ಅಧ್ಯಾತ್ಮದ ಮಾರ್ಗದರ್ಶನ ಮಾಡುವಂತಾಗಬೇಕು. ಗೋಕರ್ಣ ದಕ್ಷಿಣ ಕಾಶಿಯಾಗಬೇಕು ಎಂಬ ಭರವಸೆ ಹಾಗೂ ಆಶಯ ವ್ಯಕ್ತಪಡಿಸಿದರು. ಪೇಜಾವರ ಶ್ರೀ ಪೂಜೆ : ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳು ಮಹಾಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೂ ಮುನ್ನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಗೋಪಾಲನಾಥ ಸ್ವಾಮೀಜಿ, ರಮಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
-ರಘುಪತಿ ಯಾಜಿ
No comments:
Post a Comment