Saturday, October 11, 2008

ಗೋವುಗಳಿಂದ ಗೋಕರ್ಣ ಸಮೃದ್ಧ :ರಾಘವೇಶ್ವರ ಶ್ರೀ ಆಶಯ


ಗೋಕರ್ಣ: ಶ್ರೀಕ್ಷೇತ್ರದ ಇತಿಹಾಸದಲ್ಲಿ ಈ ದಿನ ಮಹಾಸುದಿನವಾಗಿದೆ. ಕ್ಷೇತ್ರದಿಂದ ಜನಹಿತ ಕಾರ್ಯಕ್ರಮಗಳು ಇಂದಿನಿಂದ ಆರಂಭಗೊಂಡಿವೆ ಎಂದು ರಾಮಚಂದ್ರಾಪುರ ಮಠಾಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು.

ಶ್ರೀ ಮಹಾಬಲೇಶ್ವರ ದೇವಾಲಯ ಬಳಿಯ ಸಮುದ್ರ ತೀರದ ಬೃಹತ್ ಸಭಾ ಭವನದಲ್ಲಿ ನೂರು ಗೋವುಗಳನ್ನು ಗೋಕರ್ಣ ಸುತ್ತಲಿನ ಗ್ರಾಮಸ್ಥರಿಗೆ ಶುಕ್ರವಾರ ವಿತರಿಸಿ ಅವರು ಆಶೀರ್ವಚನ ನೀಡಿದರು.

ಇಂದಿನ ನೂರು ಗೋವುಗಳ ವಿತರಣೆ ಕಾರ್ಯಕ್ರಮ ಸಾವಿರ ಗೋದಾನ ಸಮಾರಂಭದ ಪೂರ್ವಭಾವಿಯಾಗಿದೆ. ಒಂದು ತಿಂಗಳಿನಲ್ಲಿ ಸಾವಿರ ಗೋವು ಗಳನ್ನು ಸುತ್ತಮುತ್ತಲಿನ ಜನರಿಗೆ ನೀಡಲಾಗುವುದು. ಗೋವುಗಳನ್ನು ಸಾಕುವ ಆಸಕ್ತರಿದ್ದಲ್ಲಿ ಒಂದು ವರ್ಷದಲ್ಲಿ ೧೦ ಸಾವಿರ ಗೋವುಗಳನ್ನು ವಿತರಿಸುವ ಹಂಬಲ ಕೂಡ ಇದೆ ಎಂದರು.

ಗೋವುಗಳಿಂದಾಗಿ ಗೋಕರ್ಣ ಇನ್ನೂ ಸಮೃದ್ಧವಾಗಬೇಕು, ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬುದು ತಮ್ಮ ಆಶಯ ಎಂದರು.
ನಾವು ಗೋವುಗಳನ್ನು ಸಾಕುತ್ತೇವೆ ಎಂಬುದು ಸುಳ್ಳು. ಗೋವುಗಳು ನಮ್ಮನ್ನು ಸಾಕುತ್ತವೆ ಎಂಬುದು ಸತ್ಯ. ಗೋವು ನೀಡುವ ಮೂತ್ರ, ಗೋಮಯ ಸಂಗ್ರಹ ದಿಂದ ಗೋವು ಉದ್ಯಮ ಬೆಳೆದು ಬಡವರು ಹಾಗೂ ರೈತರಿಗೆ ಉದ್ಯೋಗಾವ ಕಾಶವಾಗಲಿ ಎಂದು ಶ್ರೀಗಳು ಹಾರೈಸಿದರು.

ದೇವಾಲಯವನ್ನು ಸರಕಾರ ಶ್ರೀ ಮಠಕ್ಕೆ ಹಸ್ತಾಂತರ ಮಾಡುವ ಪೂರ್ವ ದಿಂದಲೂ ಗೋಕರ್ಣದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿರಲಿಲ್ಲ. ನಮಗೆ ಹಸ್ತಾಂತರಿಸಿದ ಮೇಲೂ ದೇವಾಲಯದಿಂದ ಸಮಾಜದ ಕಾರ್ಯಗಳು ನಡೆ ದಿರಲಿಲ್ಲ. ವಿಜಯ ದಶಮಿಯ ಸುಮುಹೂರ್ತದಲ್ಲಿ ಈ ಕಾರ್ಯ ಆರಂಭ ವಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗಾಗಿ ‘ಅಮೃತಾನ್ನ ಭೋಜನ’ ಆರಂಭಿಸಲಾಗಿದೆ ಎಂದು ಶ್ರೀಗಳು ನುಡಿದರು.

ರಾಜ್ಯ ಇಂಧನ ಸಚಿವ ಈಶ್ವರಪ್ಪ ಮಾತನಾಡಿ, ಶ್ರೀಗಳು ದೇವಾಲಯದಿಂದ ಉತ್ತಮ ಕಾರ್ಯವನ್ನು ನಡೆಸುತ್ತಿದ್ದಾರೆ. ಇಂದಿನ ಸಮಾಜದಲ್ಲಿ ಜಾತಿಗೆ ತುಂಬ ಪ್ರಾಮುಖ್ಯತೆ ನೀಡಲಾಗುತ್ತಿದೆ. ಜಾತಿ ವ್ಯವಸ್ಥೆಯಿಂದ ಸಮಾಜ ಸ್ವಾಸ್ಥ್ಯ ಕಳೆದುಕೊಳ್ಳುತ್ತಿದೆ. ಆದರೆ ರಾಘವೇಶ್ವರ ಭಾರತಿ ಶ್ರೀಗಳು ಜಾತಿ ವ್ಯವಸ್ಥೆ ಮೀರಿ ಎಲ್ಲರಿಗೂ ಗೋವು ಸಂಪತ್ತನ್ನು ವಿತರಿಸುವ ಮೂಲಕ ಎಲ್ಲರನ್ನು ಜಾತ್ಯತೀತ ವಾಗಿ ಕಂಡಿದ್ದಾರೆ. ಈ ಜವಾಬ್ದಾರಿ ಅರಿತು ಸರಕಾರ ಶ್ರೀಗಳಿಗೆ ದೇವಾಲಯ ವನ್ನು ಹಸ್ತಾಂತರ ಮಾಡಿದೆ. ಅದಕ್ಕೆ ಪಕ್ಷ ಭೇದ ಮರೆತು ನಾವೆಲ್ಲ ಬೆಂಬಲಿಸುತ್ತೇವೆ ಎಂದರು. ಅಭಿವೃದ್ಧಿ ಕಾರ್ಯದಲ್ಲಿ ಎಂಥ ಅಡ್ಡಿ ಆತಂಕ ಬಂದರೂ ಯಾರೂ ವಿಚಲಿತರಾಗ ಬಾರದು. ಶ್ರೀಗಳ ಹೆಜ್ಜೆ ದಿಟ್ಟ ಹಾಗೂ ಆದರಣೀಯವಾಗಿದೆ. ಈಗ ವಿರೋಧ ವ್ಯಕ್ತಪಡಿಸುತ್ತಿರುವ ಜನರಿಗೂ ಮುಂದೆ ಇದರ ಪೂರ್ಣ ಅರಿವು ಆಗಲಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶ್ರೀಗಳಿಗೆ ಸರ ಕಾರ ದೇವಸ್ಥಾನ ಹಸ್ತಾಂತರಿಸಿದ ದಿನದಿಂದ ಈವರೆಗೆ ಕೆಲ ಕಿಡಿಗೇಡಿಗಳು ಹಾಗೂ ಕೆಲ ಮಾಧ್ಯಮಗಳಿಂದ ತೊಂದರೆ ಉಂಟಾಗಿರಬಹುದು. ಆದರೆ ಶ್ರೀಗಳ ಜನಹಿತ ಯೋಜನೆಗಳು ನೆರವೇರುವುದು ಶತಸಿದ್ಧ ಎಂದು ಹೇಳಿದರು.

ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಗಟ್ಟಿ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ಹೆಗಡೆ, ಗೋಕರ್ಣ ಗ್ರಾಪಂ ಉಪಾಧ್ಯಕ್ಷೆ ಭಾರತಿ ದೇವತೆ ಮಾತನಾಡಿದರು.

ಆರ್. ಎಸ್. ಭಾಗ್ವತ, ವಿನೋದ ಪ್ರಭು, ಉಪಾವಂತ ಮಂಡಳದ ಅಧ್ಯಕ್ಷ ಗಣೇಶ ಹಿರೇಗಂಗೆ, ಕಾರ್ಯದರ್ಶಿ ಬಾಲಕೃಷ್ಣ ಜಂಬೆ ಇನ್ನಿತರರು ವೇದಿಕೆಯ ಲ್ಲಿದ್ದರು.

No comments: