Tuesday, September 23, 2008

ಶ್ರೀಗಳಲ್ಲಿ ನೇರ ಮಾತುಕತೆ ನಡೆಯಲಿ

ಶ್ರೀರಾಮಚಂದ್ರಾಪುರ ಮಠಕ್ಕೆ ಶ್ರೀಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇಗುಲ ಹಸ್ತಾಂತರ ಮಾಡಿದ ರಾಜ್ಯ ಸರಕಾರದ ಕ್ರಮದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ಈ ವಿಷಯವನ್ನು ವಿವಾದಕ್ಕೆ ಎಳೆಯುವ ಪ್ರಯತ್ನವೂ ಆಗಿದೆ. ನಾಡಿನ ಹಲವು ಮಠಾಶರೂ ಅವರ ನಿಲುವನ್ನು ಬಹಿರಂಗ ಪಡಿಸಿದ್ದಾರೆ. ಶ್ರೀಕ್ಷೇತ್ರ ಗೋಕರ್ಣ ಇರುವುದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಎಂಬುದು ತಿಳಿದಿರುವ ಸಂಗತಿ. ಇದೇ ಜಿಲ್ಲೆಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಗೋಕರ್ಣದೊಟ್ಟಿಗೆ ಅತ್ಯಂತ ಮಧುರ ಬಾಂಧವ್ಯವಿದೆ. ಶ್ರೀಮಠವು ಗೋಕರ್ಣಕ್ಕೆ ಸನಿಹದಲ್ಲೇ ಇರುವುದೂ ಗಮನಾರ್ಹ. ಒಂದರ್ಥದಲ್ಲಿ ಪ್ರಾದೇಶಿಕ ಹಾಗೂ ಮಾನಸಿಕವಾಗಿಯೂ ಸ್ವರ್ಣವಲ್ಲೀ ಸಂಸ್ಥಾನವು ಗೋಕರ್ಣಕ್ಕೆ ಸಾಮೀಪ್ಯದಲ್ಲಿದೆ.

ಗೋಕರ್ಣದಲ್ಲಿ ನಡೆಯುವ ಯಾವತ್ತೂ ಧಾರ್ಮಿಕ ವಿ, ವಿಧಾನಗಳಿಗೆ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಾರ್ಗದರ್ಶನ, ಸಹಕಾರವಿದೆ. ಜತೆಗೆ ಶ್ರೀಮಠದಲ್ಲಿ ವಿದ್ವತ್ ಸಮ್ಮೇಳನ, ಯಜ್ಞ, ಯಾಗಾದಿಗಳಲ್ಲಿ ಗೋಕರ್ಣದ ವಿದ್ವಜ್ಜನರು, ಪಂಡಿತರು ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಸ್ವರ್ಣವಲ್ಲೀ ಮಠ ಹಾಗೂ ಗೋಕರ್ಣದ ಬಾಂಧವ್ಯ ಏನೆಂಬುದು ಅರ್ಥ ಮಾಡಿಕೊಳ್ಳಲು ಸಾಧ್ಯ. ಹೀಗಾಗಿಯೇ ಗೋಕರ್ಣ ದೇಗುಲ ಹಸ್ತಾಂತರ ಸಂಬಂಧವಾಗಿ ಸ್ವರ್ಣವಲ್ಲೀ ಮಠದ ಪೀಠಾಪತಿಗಳಾದ ಶ್ರೀ ಗಂಗಾಧರೇಂದ್ರ ಸ್ವರಸ್ವತೀ ಶ್ರೀಗಳು ವ್ಯಕ್ತ ಪಡಿಸುವ ಅಭಿಪ್ರಾಯಕ್ಕೆ ಮಹತ್ವವಿದೆ. ಪ್ರಾಯಶಃ ಮಿಕ್ಕ ಧಾರ್ಮಿಕ ಮುಖಂಡರ ಒಲವು, ನಿಲುವುಗಳಿಗಿಂತ ಸ್ವರ್ಣವಲ್ಲೀ ಶ್ರೀಗಳು ಆಡುವ ಮಾತಿಗೆ ಶ್ರೀರಾಮಚಂದ್ರಾಪುರ ಮಠ, ಸರಕಾರ ಸರಿಯಾಗಿ ಸ್ಪಂದಿಸುವ ಅವಶ್ಯಕತೆಯಿದೆ.

ಶ್ರೀ ಸ್ವರ್ಣವಲ್ಲೀ ಮಠ ಹಾಗೂ ಶ್ರೀರಾಮಚಂದ್ರಾಪುರ ಮಠಗಳೆರಡೂ ಪ್ರಧಾನವಾಗಿ ಹವ್ಯಕ ಬ್ರಾಹ್ಮಣ ಸಮುದಾಯಕ್ಕೆ ಸೇರಿದವು. ಗೋಕರ್ಣ ಹಸ್ತಾಂತರ ಅನಂತರದ ಬೆಳವಣಿಗೆ, ಎರಡೂ ಮಠಗಳ ನಡುವೆ ಕಂದಕ ಸೃಷ್ಟಿಸುವಂತಾಗಿದೆ. ಹವ್ಯಕರಷ್ಟೇ ಎಂದಲ್ಲ ; ಉತ್ತರ ಕನ್ನಡದ ಸಮಸ್ತ ಜನಾಂಗಳ ಮಧ್ಯೆ ಸ್ವರ್ಣವಲ್ಲೀ ಮಠ ಮತ್ತು ರಾಮಚಂದ್ರಾಪುರ ಮಠದ ಬೆಂಬಲಿಗರು ಎಂಬ ‘ದ್ವಿಪಂಥ’ ಮೂಡುವುದಕ್ಕೂ ಕಾರಣವಾಗುತ್ತಿದೆ. ಈ ಒಡಕು, ಬಿರುಕನ್ನು ಶಮನಗೊಳಿಸುವ ಕಾರ್ಯ ತುರ್ತಾಗಿ ಆಗಬೇಕು. ಇಲ್ಲದಿದ್ದರೆ ಧಾರ್ಮಿಕ ಬಿಕ್ಕಟ್ಟು ಉಂಟಾಗುವ ಆತಂಕ ಎದುರಾಗಿದೆ. ಈ ಪ್ರತಿಕೂಲ ವಾತಾವರಣ ತಿಳಿಗೊಳಿಸಲು ಹಾಗೂ ಭಕ್ತ ಸಮುದಾಯದಲ್ಲಿ ಸಮನ್ವಯದ ಬಂಧ ಬೆಸೆಯಲು ಶ್ರೀ ಸ್ವರ್ಣವಲ್ಲೀ ಶ್ರೀಗಳು ಮುಕ್ತ ಮನಸ್ಸು ಹೊಂದಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ಶ್ರೀಗಳೂ ಈ ನೆಲೆಯಲ್ಲಿ ಒಲವಿನ ಹಣತೆ ಹೊತ್ತಿಸುತ್ತಾರೆ ಎಂಬ ಭರವಸೆ, ವಿಶ್ವಾಸವು ಈರ್ವರೂ ಶ್ರೀಗಳನ್ನು ಹತ್ತಿರದಿಂದ ಬಲ್ಲವರಿಗೆ ಇದೆ.

ಸ್ವರ್ಣವಲ್ಲೀ ಶ್ರೀಗಳು ಈ ಸಂಬಂಧವಾಗಿ ಜಯನಗರದ ರಾಗಿಗುಡ್ಡ ಆಂಜನೇಯ ದೇವಸ್ಥಾನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯೊಂದನ್ನು ನಡೆಸಿದರು. ಈ ಸಂದರ್ಭದಲ್ಲಿ ಗೋಕರ್ಣ ಹಸ್ತಾಂತರದ ಬಗ್ಗೆ ತಮ್ಮ ಸಾತ್ವಿಕ ಅಸಮಾಧಾನವನ್ನೂ ಒಂದು ರೀತಿಯಲ್ಲಿ ವ್ಯಕ್ತ ಪಡಿಸಿದರು. ಆದರೆ, ಅವರ ಮಾತುಗಳಲ್ಲಿ ಶ್ರೀ ರಾಘವೇಶ್ವರರ ಕುರಿತಾಗಿ ಗೌರವ, ಮೆಚ್ಚುಗೆ ಇದ್ದಿದ್ದು ಸ್ಪಷ್ಟವಾಗಿತ್ತು. ಗೋಕರ್ಣ ವಿವಾದದಿಂದ ರಾಮಚಂದ್ರಾಪುರ ಮಠದ ಶ್ರೀಗಳು ಇಕ್ಕಟ್ಟಿನಲ್ಲಿ ಸಿಲುಕಬಾರದು ಎಂಬ ಕಾಳಜಿಯೂ ಅವರ ಮಾತಿನಲ್ಲಿತ್ತು. ಜತೆಗೆ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ನಡೆದ ಸಭೆಯ ನಿರ್ಣಯಗಳು ಮಾಧ್ಯಮದಲ್ಲಿ ತಪ್ಪಾಗಿ ಬಂದ ಬಗ್ಗೆ ವಿಷಾದವೂ ಇತ್ತು.

ಸುದ್ದಿಗೋಷ್ಠಿಯ ಪೂರ್ಣಪಾಠ ಹೀಗಿದೆ
ಗೋಕರ್ಣ ಹಸ್ತಾಂತರ ವಿವಾದಕ್ಕೆ ತೆರೆ ಎಳೆಯಲು ಶೃಂಗೇರಿ ಶ್ರೀಗಳ ಮಾರ್ಗದರ್ಶನ ಪಡೆಯಬೇಕು. ಅಲ್ಲದೆ ಯತಿವರೇಣ್ಯರ ಸಮಿತಿ ರಚಿಸಿ ಸಂಧಾನ ಪ್ರಕ್ರಿಯೆ ಮಾಡಬೇಕು. ನ್ಯಾಯಾಲಯದ ಮೂಲಕ ಇದನ್ನು ಇತ್ಯರ್ಥ ಪಡಿಸುವುದು ಅಷ್ಟೊಂದು ಉಚಿತವಲ್ಲ. ಯಾಕೆಂದರೆ ಇದಕ್ಕೆ ವಿಳಂಬವಾಗುತ್ತದೆ. ಆ ಅವಯಲ್ಲಿ ಮತ್ತಷ್ಟು ಗೊಂದಲಕ್ಕೆ ಎಡೆಯಾದೀತು.

ರಾಘವೇಶ್ವರರಿಗೂ ನಮಗೂ ಆತ್ಮೀಯ ಸಂಬಂಧವಿದೆ. ಅನೇಕ ಕಾರ್ಯಕ್ರಮದಲ್ಲಿ ಒಂದಾಗಿ ಭಾಗವಹಿಸಿ ಯತಿಗಳ ಸಮನ್ವಯ ಹೇಗಿರಬೇಕು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಆದರೆ, ಗೋಕರ್ಣದ ವಿಚಾರದಲ್ಲಿ ರಾಮಚಂದ್ರಾಪುರ ಮಠವನ್ನು ಸಂಪರ್ಕಿಸಿ ಮಾತುಕತೆ ಆಡುವ ಪ್ರಯತ್ನ ಫಲಕಾರಿಯಾಗಿಲ್ಲ. ಈಗಲೂ ಈ ಪ್ರಯತ್ನ ಮುಂದುವರಿದಿದೆ. ಮಾತುಕತೆ ಏರ್ಪಡುವ ವಿಶ್ವಾಸವೂ ನಮಗಿದೆ. ಈ ವಿಷಯದಲ್ಲಿ ರಾಜ್ಯ ಸರಕಾರವೂ ವಿವೇಚನೆ ಮಾಡಬೇಕು. ಗೋಕರ್ಣ ಕ್ಷೇತ್ರ ರಾಮಚಂದ್ರಾಪುರ ಮಠಕ್ಕೆ ಸೇರಿದ ಬಗ್ಗೆ ದಾಖಲೆ ಇದೆ ಎನ್ನುತ್ತಾರೆ. ಆದರೆ, ನಮ್ಮ ದೃಷ್ಟಿಯಲ್ಲಿ ಆ ದಾಖಲೆಗಳು ಅಷ್ಟು ಗಟ್ಟಿಯಾಗಿವೆ ಎನ್ನಿಸುವುದಿಲ್ಲ. ಮುಂದೆ ಕೋರ್ಟ್‌ನಲ್ಲಿ ಆ ಸಾಕ್ಷ್ಯಾಧಾರಗಳು ಸಿಂಧು ಆಗದೇ ಹೋದರೆ ತೊಂದರೆಯಾದೀತು. ಪರ್ಯಾಯವಾಗಿ ಸರಕಾರಕ್ಕೂ, ರಾಮಚಂದ್ರಾಪುರ ಮಠಕ್ಕೂ ಮುಖಭಂಗವಾದೀತು. ಅಂತಹ ಸಂದರ್ಭ ಬರಬಾರದು ಎಂಬುದು ನಮ್ಮ ಕಳಕಳಿ.
ಹೀಗಾಗಿ ನಮ್ಮವರಿಗೆ ತೊಂದರೆ ಬರಬಾರದು ಎಂಬ ನೆಲೆಯಲ್ಲಿ ಯೋಚಿಸಿ ಶೃಂಗೇರಿ ಶ್ರೀಗಳನ್ನೂ ನಾವು ಸಂಪರ್ಕ ಮಾಡಿದ್ದೇವೆ. ಈ ಗೊಂದಲ ಪರಿಹಾರಕ್ಕೆ ಸಂಧಾನ ಮಾಡುವಂತೆ ಕೇಳಿಕೊಳ್ಳಲಾಗಿದೆ. ಅವರ ಮಾರ್ಗದರ್ಶನವನ್ನೂ ಬಯಸಲಾಗಿದೆ. ಪೇಜಾವರ ಶ್ರೀಗಳೂ ಈ ನಿಟ್ಟಿನಲ್ಲಿ ಕಾರ್ಯಶೀಲರಾಗಿದ್ದಾರೆ.

ಮುಖ್ಯಮಂತ್ರಿಗೆ ಪತ್ರ
ಗೋಕರ್ಣ ಹಸ್ತಾಂತರ ವಿಷಯವಾಗಿ ನಮ್ಮ ಮಠದಲ್ಲಿ ನಡೆದ ಸಭೆಯ ನಿರ್ಣಯದ ಪ್ರತಿಯನ್ನು ಮುಖ್ಯಮಂತ್ರಿಗಳಿಗೆ ಕಳುಹಿ ಕೊಡಲಾಗಿದೆ. ಸುಧರ್ಮ ಸಭಾಭವನದಲ್ಲಿ ನಡೆದ ಅಂದಿನ ಸಭೆಯಲ್ಲಿ ಗೋಕರ್ಣಕ್ಕೆ ಪ್ರತ್ಯಕ್ಷ ಯಾ ಪರೋಕ್ಷ ಸಂಬಂಧ ಪಟ್ಟ ವಿವಿಧ ಮಠಾಪತಿಗಳು, ಗೌರವ ಪ್ರತಿನಿಗಳು ಹಾಗೂ ಬೇರೆ ಬೇರೆ ವರ್ಗ ಸಮುದಾಯಗಳ ಜನರೂ ಸಮಾವೇಶಗೊಂಡಿದ್ದರು. ಮುಖ್ಯವಾಗಿ ಗೋಕರ್ಣದ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಮಹತ್ವ, ಕಾನೂನು ದೃಷ್ಟಿಕೋನ, ಸಾಮಾಜಿಕ ದೃಷ್ಟಿ ವಿಷಯವಾಗಿ ಚರ್ಚೆ ಚಿಂತನೆ ಮಾಡಲಾಯಿತು.

ಕಾನೂನು ದೃಷ್ಟಿಕೋನ
ಗೋಕರ್ಣವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸುವಾಗ ಕಾನೂನಿನ ಅಂಶಗಳನ್ನು ಕೂಲಂಕಷವಾಗಿ ನೋಡಿಲ್ಲ ಎಂಬುದು ನಮ್ಮ ಅಭಿಪ್ರಾಯ. ಇದರಲ್ಲಿ ಸಾಕಷ್ಟು ತೊಡಕು ಇರುವ ಬಗ್ಗೆ ಕಾನೂನು ತಜ್ಞರು ಹಾಗೂ ಇತಿಹಾಸಕಾರರೂ ಹೇಳಿದ್ದಾರೆ. ಈ ಹಿಂದೆ ಗೋಕರ್ಣ ದೇಗುಲವನ್ನು ಧಾರ್ಮಿಕ ದತ್ತಿ ಇಲಾಖೆಯ ಅಸೂಚಿತ ಪಟ್ಟಿಯಿಂದ ಕೈಬಿಡಬೇಕು ಎನ್ನುವ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದೂ ಇಲ್ಲಿ ಉಲ್ಲೇಕಾರ್ಹ. ಒಂದು ವೇಳೆ ಇದಕ್ಕೆ ಅವಕಾಶವಿದ್ದರೂ ಗೋಕರ್ಣವನ್ನು ಯಾವುದೇ ವ್ಯಕ್ತಿ, ಸಂಸ್ಥೆಗೆ ಕೊಡಲು ಬರುವುದಿಲ್ಲ ಎಂಬುದನ್ನು ಅಂದಿನ ಮಹಾಸಭೆಯಲ್ಲಿ ಗಮನಿಸಲಾಗಿದೆ. ಕಾನೂನು ಸಂಬಂತ ಎಲ್ಲ ವಿಷಯವನ್ನು ದಾಖಲೆ ಸಹಿತಿ ಮುಖ್ಯಮಂತ್ರಿಗೆ ಕಳುಹಲಾಗಿದೆ.

ಧಾರ್ಮಿಕ ಅಂಶ
ಗೋಕರ್ಣವು ರಾಮಚಂದ್ರಾಪುರ ಮಠದ ವಶವಾದ್ದರಿಂದ ಮಹಾಬಲೇಶ್ವರ ದೇಗುಲದೊಂದಿಗೆ ಧಾರ್ಮಿಕ ಸಂಬಂಧವಿರುವ ಇತರ ಮಠಾಶರಿಗೆ ಸಹಜವಾಗಿ ಮುಜುಗರ ಉಂಟಾಗುವಂತಾಗಿದೆ. ಮಹಾಬಲೇಶ್ವರ ದೇವರನ್ನು ಪೂಜಿಸಲು ರಾಮಚಂದ್ರಾಪುರ ಮಠದ ಅನುಮತಿಗೆ ಕಾಯುವ ಸನ್ನಿವೇಶ ಎದುರಾಗುವಂತಾಗಿದೆ. ಗೋಕರ್ಣ ರಥೋತ್ಸವದಲ್ಲಿ ಗೌರವ ಸೂಚಕವಾಗಿ ಇತರ ಮಠಗಳನ್ನು ರಥಗಾಣಿಕೆಗೆ ಕರೆಯುವ ಪದ್ಧತಿ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದರಲ್ಲಿ ಸ್ವರ್ಣವಲ್ಲೀ ಮಠಕ್ಕೆ ವಿಶೇಷ ಸ್ಥಾನವಿದ್ದು, ನಮ್ಮ ೧೬ ಸೀಮೆಯನ್ನು ಪ್ರತ್ಯೇಕವಾಗಿ ಕರೆಯುವ ಸಂಪ್ರದಾಯವಿದೆ. ಹಸ್ತಾಂತರದಿಂದಾಗಿ ಇಂಥ ಅನೇಕ ಸತ್ಸಂಪ್ರದಾಯಗಳು ಮೊಟಕಾಗುತ್ತವೆಯೇ ? ಎಂಬ ಪ್ರಶ್ನೆ ಎದ್ದಿದೆ.

ಐತಿಹಾಸಿಕ ಹಿನ್ನೆಲೆ
ಶ್ರೀಕ್ಷೇತ್ರದ ಬಗ್ಗೆ ರಾಮಾಯಣದಲ್ಲೇ ಉಲ್ಲೇಖವಿದೆ. ರಾವಣನು ಕೈಲಾಸದಿಂದ ತಂದ ಆತ್ಮಲಿಂಗವನ್ನು ಗಣಪತಿಯು ಗೋಕರ್ಣದಲ್ಲಿ ಪ್ರತಿಷ್ಠಾಪಿಸಿದ್ದು ಸಕಲರಿಗೂ ತಿಳಿದ ವಿಷಯ. ಮುಂದೆ ಇತಿಹಾಸ ಕಾಲದಲ್ಲಿಯೂ ಕದಂಬ ಮಯೂರವರ್ಮ ಕ್ರಿ.ಶ. ನಾಲ್ಕನೇ ಶತಮಾನದಲ್ಲಿ ಮಹಾಬಲೇಶ್ವರ ದೇವರ ಧಾರ್ಮಿಕ ಕೈಂಕರ್ಯಕ್ಕೆ ವ್ಯವಸ್ಥೆ ಮಾಡಿದ್ದು ಇದೆ. ಅನಂತರ ವಿವಿಧ ರಾಜಮನೆತನಗಳು ಇಲ್ಲಿಗೆ ನಡೆದುಕೊಂಡಿದ್ದು, ವಿಜಯನಗರದ ಬುಕ್ಕನು ದೇಗುಲದ ಪೂಜೆಗೆ ಸೌಕರ್ಯ ಒದಗಿಸಿದ್ದು, ಬ್ರಿಟೀಷ್ ಅಕಾರಿಗಳೂ ದತ್ತಿ ನೀಡಿ ಪೋಷಿಸಿದ್ದು, ಸರಕಾರವೇ ಮುದ್ರಿಸಿದ ಕರ್ನಾಟಕ ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

ಸಾಮಾಜಿಕ ದೃಷ್ಟಿ
ಗೋಕರ್ಣ ಹಸ್ತಾಂತರದಿಂದ ಅನೇಕ ವಿಧವಾದ ಸಾಮಾಜಿಕ ಕೋಲಾಹಲವಾಗಿದೆ. ಸರಕಾರದ ನಿರ್ಣಯ ಅನುಸರಿಸಿ ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜ್ಯದ ೩೬ ದೇವಾಲಯದ ಆಡಳಿತವನ್ನು ತಮಗೆ ಬಿಟ್ಟು ಕೊಡುವಂತೆ ಕೇಳಿದ್ದಾರೆ. ಗದಗ-ಡಂಬಳದ ಶ್ರೀ ತೋಂಟದಾರ್ಯ ಮಠದ ಸ್ವಾಮಿಗಳು ಶ್ರೀ ಯಡಿಯೂರು ಸಿದ್ಧಲಿಂಗೇಶ್ವರ ದೇಗುಲವನ್ನು ತಮಗೆ ಕೊಡುವಂತೆ ವಾದ ಮಂಡಿಸಿದ್ದಾರೆ. ಹೀಗೆ ಹಲವು ಮಠಾಶರು ಇನ್ನೂ ಅನೇಕ ದೇವಸ್ಥಾನಗಳನ್ನು ತಮಗೆ ವಹಿಸುವಂತೆ ಕೇಳಲು ಮುಂದಾಗಿದ್ದಾರೆ. ಇದರಿಂದಾಗಿ ವಿವಿಧ ಜಾತಿ, ಸಮುದಾಯದವರು ಗೋಕರ್ಣ ಹಸ್ತಾಂತರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದು, ಸಾಮಾಜಿಕ ವೈಮನಸ್ಯ ಸೃಷ್ಟಿಯಾಗಿದೆ.

ಕೂಡಲೇ ಆಗಬೇಕಾದ್ದು...
ದಿನ ಕಳೆದಂತೆ ಈ ಗೊಂದಲ ಜಟಿಲವಾಗುವ ಲಕ್ಷಣ ಕಾಣುತ್ತಿದೆ. ಹೀಗಾಗಿ ಗೋಕರ್ಣ ಹಸ್ತಾಂತರಕ್ಕೆ ಸರಕಾರ ಹೊರಡಿಸಿರುವ ಅಸೂಚನೆಯನ್ನು ತಕ್ಷಣ ಮರು ಪರಿಶೀಲನೆಗೆ ಒಳಪಡಿಸಬೇಕು. ಸ್ವರ್ಣವಲ್ಲೀ ಮಠದ ಮಹಾಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ನಿರ್ಣಯಗಳನ್ನು ಆಧರಿಸಿ ಸರಕಾರವೇ ಇದಕ್ಕೊಂದು ಪರಿಹಾರ ಸೂತ್ರ ಕಂಡು ಹಡಿಯಬೇಕು. ಯತಿಗಳ ನಡುವೆ ಸಮನ್ವಯ, ಸಂಧಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಸ್ಪಷ್ಟೀಕರಣ
ಸ್ವರ್ಣವಲ್ಲೀ ಮಹಾಸಭೆಯಲ್ಲಿ ಗೋಕರ್ಣ ಹಸ್ತಾಂತರ ವಿರುದ್ಧ ನಾವು ಹೋರಾಡುವುದಾಗಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ತಪ್ಪು ಅಭಿಪ್ರಾಯ ಬಂದಿದೆ. ಹಾಗಂತ ನಾವು ಹೇಳಿಲ್ಲ. ಈ ಸಂಬಂಧವಾಗಿ ಈಗಾಗಲೇ ಹೋರಾಟ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲಿ ನಮ್ಮ ಪಾತ್ರವಿಲ್ಲ. ಆದರೆ, ಅದನ್ನು ತಡೆಯುವುದು ಕಷ್ಟ ಎಂಬ ಆತಂಕ ವ್ಯಕ್ತ ಪಡಿಸಲಾಗಿದೆ.

- ಪತ್ರೆಮನೆ
ganeshhalkani@gmail.com

4 comments:

prajavani said...

svarnavalli gurugalu gokarnavannu sarkaradinda modale padeyabahudittu. adu bittu bereyavaru sahasa madi padedukondanantara bobbe hodeyuva avashyakate yenide?

Unknown said...

ಗಣೇಶ ಹಾಲಕನಿ ಅವರಿಗೆ ಮಾಹಿತಿಯನ್ನು ಒದಗಿಸಿಕೊಟ್ಟಿದಕ್ಕೆ ಧನ್ಯವಾದಗಳು. ಆದರೆ ಸ್ವರ್ಣವಲ್ಲೀ ಶ್ರೀಗಳ ನಡೆದುಕೊಂಡ ರೀತಿ, ಆಡಿದ ಮಾತುಗಳು ಅವರನ್ನು ಎಲ್ಲರ ಧ್ರಷ್ಟಿಯಲ್ಲಿ ಅವರನ್ನು ಪಾತಾಳಕ್ಕೆ ದುಡಿದ್ದು ಸುಳ್ಳಲ್ಲ . ಅದು ಅಲ್ಲದೆ ಮೊದಲಿನಿಂದಲೂ ಅವರಿಗೆ ಶ್ರೀರಾಮಚಂದ್ರಾಪುರ ಮಠವನ್ನು ಕಂಡರೆ ಆಗೋದಿಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ಸತ್ಯ. ಗೋಕರ್ಣದಲ್ಲಿ ನಡೆಯುತ್ತಿರುವ ಅನಾಚಾರವನ್ನು ಕಂಡು ಕಾಣದೆ ಇದ್ದ ಸ್ವರ್ಣವಲ್ಲೀ ಶ್ರೀಗಳು ಅದನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಕೊಟ್ಟ ಕ್ಷಣಕ್ಕೆ ಅದನ್ನು ವಿರೋಧಿಸಲು ಪ್ರಾರಮ್ಬಿಸಿದೇಕೆ ಎನ್ನುವುದು ಯಕ್ಷ ಪ್ರಶ್ನೆ.

ಗಣೇಶ ಅವ್ರೆ ನೀವೇ ಹೇಳಿದ ಹಾಗೆ ಸ್ವರ್ಣವಲ್ಲೀ, ಗೋಕರ್ಣಕ್ಕೆ ಪ್ರಾದೇಶಿಕ ಹಾಗೂ ಮಾನಸಿಕವಾಗಿಯೂ ಸ್ವರ್ಣವಲ್ಲೀ ಸಂಸ್ಥಾನವು ಹತ್ತಿರವಾಗಿದೆ ಎಂದು ಅಂದರೆ ಅಲ್ಲಿ ನಡೆಯುತ್ತಿದ್ದ ಎಲ್ಲ ಅನಾಚಾರಕ್ಕು ಸ್ವರ್ಣವಲ್ಲೀಯಾ ಪ್ರೋತ್ಸಾಹ ಇದೆ ಎನ್ನುವುದು ಸ್ಪಟ್ಟವಾಗಿ ಗೋಚರವಾಗುತಿದೆ ಅಲ್ಲವೇ?. ನಾಡಿನ ಬಹುತೇಕ ಜನ ಸರ್ಕಾರದ ಕ್ರಮವನ್ನು ಸ್ವಾಗತ ಮಾಡುತ್ತ ಇರುವಾಗ ಕೇವಲ ತಮ್ಮ ಅಸ್ತ್ವಿತ್ವವನ್ನು ತೋರಿಸಲು ಕೆಲವೊಂದು ಗೋಕರ್ಣದ ಪುಂಡ ಪೋಕರಿಗಳನ್ನು ಕಟ್ಟಿ ಕೊಂಡು ವಿರೋದ ಮಾಡಿದರೆ ಅದಕ್ಕೆ ಯಾವುದೇ ಬೆಲೆ ಇಲ್ಲ.

ಗೋಕರ್ಣವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ ಕೊಟ್ಟ ವಿಚಾರವನ್ನು ಏಕೆ ವಿರೋದ ಮಾಡುತ್ತ ಇದ್ದಾರೆ ಎನ್ನುವದನ್ನು ಮೊದಲು ತಿಳಿಸಬೇಕು. ಅವರಿಗೇನು ಶ್ರೀರಾಮಚಂದ್ರಾಪುರ ಮಠ ತೊಂದರೆ ಕೊಟ್ಟಿದೆಯೇ?

ಸರ್ಕಾರದ ಕ್ರಮವನ್ನು ಬಹುತೇಕ ಜನತೆ ಧನಾತ್ಮಕವಾದ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ತಾವು ತಿಳಿಸಿದ ಹಾಗೆ ಕೆಲವೇ ಕೆಲವು ಮಂದಿ ಅಲ್ಲ. ಕೇವಲ ಕೇವಲ ಕೆಲವಾರು ಗೋಕರ್ಣದ ಜನರು ಮತ್ತು ಸ್ವರ್ಣವಲ್ಲೀ ಮಾತ್ರ ಅದಕ್ಕೆ ವಿರೋದ ಮಾಡುತ್ತ ಇರುವದು. ನಿಮ್ಮ ಗೋಕರ್ಣದ ಕ್ರಮದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ ಎನ್ನುವುದು ತಪ್ಪು ಗ್ರಹಿಕೆ. ಅದೇ ರೀತಿ ನಾಡಿನ ಹಲವಾರು ಮಠದಿಶರರು, ರಾಜಕೀಯ ನಾಯಕರುಗಳು,ಹಿರಿಯರು, ನಿವ್ರತ್ತ ನ್ಯಾಯಧಿಶರುಗಳು, ಸಾಹಿತಿಗಳು ಇನ್ನಿತರರು ಎಲ್ಲ ಸರ್ಕಾರದ ಕ್ರಮ ಅದಕ್ಕಿಂತ ಹೆಚ್ಚಿನದಾಗಿ ಶ್ರೀರಾಮಚಂದ್ರಾಪುರ ಮಠದ ಮೇಲಿನ ಭರವಸೆ ಮೇರೆಗೆ ಸ್ವಾಗತ ಮಾಡಿದ್ದಾರೆ.

ಕೇವಲ ಯಾರೋ ಶ್ರಿ ಪ್ರಸನ್ನನಾಥರಂಥವರು ಸ್ವರ್ಣವಲ್ಲೀಯವರ ಜೊತೆಗೆ ಇದ್ದಾರೆ. ಏಕೆಂದರೆ ಪರಮಪೂಜ್ಯ ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೈ ಮೀರಿ ಅವರು ಅಂಥ ದುಸ್ಸಾಹಸಗಳನ್ನು ಮಾಡುತ್ತಿದ್ದಾರೆ ಎಂಬ ಮನೋಭಾವ ಈಗಾಗಲೇ ನೆಲೆಯೂರಿದೆ. ಅದಿಲ್ಲದಿದ್ದರೆ ಶ್ರೀ ರಾಘವೇಶ್ವರರ ಜತೆಗಿನ ಭೇಟಿಯ ಭಾವಚಿತ್ರ ಪತ್ರಿಕೆಗಳಲ್ಲಿ ಅಚ್ಚಾಗಿದೆ. ಅವರು ಹಸ್ತಾಂತರವನ್ನು ಸ್ವಾಗತಿಸಿದ ಸುದ್ದಿ ಜತೆಯಲ್ಲೇ ಪ್ರಕಟಗೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಪುನರುತ್ಥಾನ ಸಂಕಲ್ಪ ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಅವರ ಹೆಸರೂ ಮುದ್ರಣಗೊಂಡಿತ್ತು. ಹೀಗಿದ್ದೂ, ಅವರದೇ ಶಾಖಾ ಮಠದ ಸ್ವಾಮೀಜಿಯಾಗಿ ಪ್ರಸನ್ನನಾಥರು ಸಾಮಾನ್ಯರನ್ನೂ ನಾಚಿಸುವ ರೀತಿಯಲ್ಲಿ ಗೋಕರ್ಣ ವಿಷಯದಲ್ಲಿ ಕದನಕುತೂಹಲಿಯಾಗಿ ವರ್ತಿಸುತ್ತಿದ್ದಾರೆಂದರೆ ಅದು ಪರಿಸ್ಥಿತಿಯ ವಿಕೋಪ.

ಯಾವುದೇ ವ್ಯಕ್ತಿ ಇರಲಿ, ಸಂಸ್ಥೆ ಇರಲಿ, ಹಿರಿಯರಾಗಿರಲಿ ಕಿರಿಯರಾಗಿರಲಿ, ಅಭಿಪ್ರಾಯ ಉತ್ತಮವಾಗಿದ್ದರೆ ಯಾರಾದರು ಅದರ ಬಗ್ಗೆ ಗಮನ ಹರಿಸುತ್ತಾರೆ. ತಾವೇ ಹೇಳಿದ್ದೆ ಕೇಳಬೇಕು, ತಾವು ಹೇಳಿದಕ್ಕೆ ಎಲ್ಲ ಸ್ಪಂದಿಸುವ ಅವಶ್ಯಕತೆಯಿದೆ ಎನ್ನುವ ಸ್ವರ್ಣವಲ್ಲೀಯವರ ಮಾತನ್ನು ಒಪ್ಪಿಕೊಳಲು ಸಾದ್ಯವಿಲ್ಲ.

ನಿಜ, ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವರ್ಣವಲ್ಲೀ ಶ್ರೀಗಳು, ಶ್ರೀರಾಮಚಂದ್ರಾಪುರ ಮಠದ ಯತಿಗಳಾದ ಶ್ರೀ ರಾಘವೇಶ್ವರರ ಕುರಿತು ಹೇಳಿದ ಮಾತು ಮೆಚ್ಚುವಂತದ್ದು. ಆದರೆ ಇದೇ ಸ್ವರ್ಣವಲ್ಲೀ ಶ್ರೀಗಳು ಕೆಲವು ದಿನಗಳ ಹಿಂದೆ ಶ್ರೀ ರಾಘವೇಶ್ವರರ ಕುರಿತು "ಕಲಿ" ಎಂದು ಸಂಬೋದಿಸಿ ಕರೆದಿದ್ದು ಅಲ್ಲದೆ ಅದೇ ವೇದಿಕೆ ಮೇಲಿದ್ದ ಸ್ವರ್ಣವಲ್ಲೀ ಶ್ರೀಗಳ ಸ್ನೇಹಿತರು ಶ್ರೀಗಳನ್ನು ರಾವಣ ಎಂದು ಸಂಬೋದಿಸಿದರು. ಇವಾಗ ಇರುವ ಪ್ರೀತಿ ಕೆಲವು ದಿನಗಳ ಹಿಂದೆ ಎಲ್ಲಿ ಹೋಗಿತ್ತು ಎನ್ನುವದನ್ನು ಸ್ವರ್ಣವಲ್ಲೀ ಶ್ರೀಗಳು ತಿಳಿಸ ಬೇಕಾಗಿದೆ.( ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು http://www.bimbapratibimba.blogspot.com/)
ಒಂದು ಪ್ರಶ್ನೆ ಮತ್ತೆ ಮತ್ತೆ ನನ್ನನ್ನು ಕಾಡುತ್ತ ಇದೆ. ಸ್ವರ್ಣವಲ್ಲೀ ಶ್ರೀಗಳು ಏಕೆ ವಿರೋದ ಮಾಡುತ್ತ ಇದ್ದಾರೆ ಎಂದು? "ರಾಮಚಂದ್ರಾಪುರ ಮಠವನ್ನು ಸಂಪರ್ಕಿಸಿ ಮಾತುಕತೆ ಆಡುವ ಪ್ರಯತ್ನ ಫಲಕಾರಿಯಾಗಿಲ್ಲ. ಈಗಲೂ ಈ ಪ್ರಯತ್ನ ಮುಂದುವರಿದಿದೆ. ಮಾತುಕತೆ ಏರ್ಪಡುವ ವಿಶ್ವಾಸವೂ ನಮಗಿದೆ"----ಅಂದರೆ ಯಾವ ತರಹದ ಮಾತುಕತೆಯನ್ನು ಸ್ವರ್ಣವಲ್ಲೀ ಶ್ರೀಗಳು ಮಾತಾಡಲು ಬಯಸುತ್ತಾರೆ? "ಇತರ ಮಠಾಶರಿಗೆ ಸಹಜವಾಗಿ ಮುಜುಗರ ಉಂಟಾಗುವಂತಾಗಿದೆ"--ಯಾವ ತರಹದ ಮುಜುಗರ ಸರ್ಕಾರ ಅಥವಾ ರಾಮಚಂದ್ರಾಪುರ ಮಠ ನಿಮಗೆ ಮಾಡಿದೆ? ಸ್ವರ್ಣವಲ್ಲಿಯವರು ಗಮನಿಸ ಬೇಕು ಕೇವಲ ನೀವೊಬ್ಬರೇ ಇದನ್ನು ವಿರೋದಿಸುತ್ತಿರುವವರು ಎಂದು.

ಹಸ್ತಾಂತರದಿಂದಾಗಿ ಅನೇಕ ಸತ್ಸಂಪ್ರದಾಯಗಳು ಮೊಟಕಾಗುತ್ತವೆಯೇ ಎಂಬ ಸ್ವರ್ಣವಲ್ಲಿಯವರ ಸಂಶಯ ಕೇವಲ ಒಂದು ಪ್ರಶ್ನೆ ಮಾತ್ರವಾಗಿದೆ.ರಾಮಚಂದ್ರಾಪುರ ಮಠದ ಶ್ರೀಗಳು ಸಾವಿರಾರು ಸಲ ಘಂಟಾಘೋಷವಾಗಿ ಎಲ್ಲ ಸತ್ಸಂಪ್ರದಾಯಗಳು ಮುಂದುವರೆಯುತ್ತವೆ ಎಂದು ಹೇಳಿರುವಾಗ ಅವರ ಮೇಲಿರುವ ನಿಮ್ಮ ನಂಬಿಕೆ, ಗೌರವ ಎಷ್ಟು ಎನ್ನುವುದು ತೋರಿಸುತ್ತೆ. ಅಲ್ಲದೆ ಗೋಕರ್ಣ ಹಸ್ತಾಂತರವನ್ನು ಎಲ್ಲ ಜಾತಿಯವರು ಸ್ವಾಗತ ಮಾಡಿದ್ದೂ, 15ನೇ ತಾರಿಕಿನದ್ದು ನಡೆದ್ದ ಮಹಾಸಂಕಲ್ಪ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಿದ್ದರು. ಇವಾಗ ವಿರೋದ ಮಾಡುತ್ತ ಇರೋರು ಕೇವಲ ಹವ್ಯಕ ಪಂಗಡದ ಕೆಲ್ವೊಬ್ಬ ಜನರು ಬಿಟ್ಟರೆ ಬೇರೆ ಯಾರು ಅಲ್ಲ.

ಮೇಲೆ ಹೇಳಿದಂತೆ ಸ್ವರ್ಣವಲ್ಲೀ ಮಠದ ಮಹಾಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ನಿರ್ಣಯಗಳಾದ "ಕಲಿ", "ರಾವಣ" ಎಂಬ ಶಬ್ದಗಳು ಎಂದು ಎಲ್ಲರಿಗು ತಿಳಿದಿರುವ ಸತ್ಯ. ಕೊನೆಯದಾಗಿ "ಸ್ವರ್ಣವಲ್ಲೀ ಮಹಾಸಭೆಯಲ್ಲಿ ಗೋಕರ್ಣ ಹಸ್ತಾಂತರ ವಿರುದ್ಧ ನಾವು ಹೋರಾಡುವುದಾಗಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ತಪ್ಪು ಅಭಿಪ್ರಾಯ ಬಂದಿದೆ. ಹಾಗಂತ ನಾವು ಹೇಳಿಲ್ಲ. ಈ ಸಂಬಂಧವಾಗಿ ಈಗಾಗಲೇ ಹೋರಾಟ ನಡೆಯುವ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲಿ ನಮ್ಮ ಪಾತ್ರವಿಲ್ಲ. ಆದರೆ, ಅದನ್ನು ತಡೆಯುವುದು ಕಷ್ಟ ಎಂಬ ಆತಂಕ ವ್ಯಕ್ತ ಪಡಿಸಲಾಗಿದೆ" ಈ ವಾಕ್ಯ ಏನೇನ್ದ್ದು ಗೊತ್ತಾಗಲಿಲ್ಲ. ಅದೇ 15 ನೇ ತಾರಿಕಿನದ್ದು ಸಭೆ ಮಾಡಿ ಸರ್ಕಾರಕ್ಕೆ ಸಭೆಯ ನಿರ್ಣಯಗಳನ್ನು ತಿಳಿಸಿರುವ ಮತ್ತು ವಿರೋದಿಗಳ ಗುಂಪಿನ ನಾಯಕರಾದ ತಾವು ಎಷ್ಟು ರಾಜಕೀಯ ಮಾಡುತ್ತ ಇದ್ದೀರಾ ಎಂಬುದು ಗೊತ್ತಾಗುತ್ತದೆ.

ದಯಮಾಡಿ ತಮ್ಮ ಒಳ ರಾಜಕೀಯವನ್ನು ಬಿಟ್ಟು ಗೋಕರ್ಣದ, ಈ ನಾಡಿನ ಶ್ರೆಯೋಭಿವ್ರದ್ದಿಗೆ ಸಹಕರಿಸಿ ತಮ್ಮ ಮೇಲಿರುವ ಅತೀ ಕೆಟ್ಟ ಭಾವನೆಗಳನ್ನು ತೊಳೆದು ಹಾಕಿ ಎಂದು ಕೇಳಿಕೊಳ್ಳುತ್ತೇನೆ. ಆ ಮಹಾಬಲೇಶ್ವರ ಆದಸ್ಟು ಬೇಗ ಒಳ್ಳೆ ಬುದ್ದಿ ಕರುಣಿಸಲಿ ಎಂದು ಪ್ರಾಥಿಸಿಕೊಳ್ಳುತ್ತೇನೆ.

Unknown said...

ಪ್ರಜಾವಾಣಿಯವರೇ....

ಒಳ್ಳೇ ಕಮೆಂಟ್ಸು. ಆದರೆ ಶ್ರೀಮಠ ಸಾಹಸ ಮಾಡಿ ಪಡೆದುಕೊಂಡಿದ್ದಲ್ಲ. ಊರವರು ಕೊಡಬೇಕು ಅಂತ ಅರ್ಜಿ ಕೊಟ್ಟರು. ಸರಕಾರ ಅದನ್ನು ಪರಿಶೀಲಿಸಿ ಕೊಟ್ಟಿತು.

ಪತ್ರೆಮನೆಯವರೇ..
>ಸ್ವರ್ಣವಲ್ಲಿ ಶ್ರೀಗಳಿಗೆ ಶ್ರೀ ರಾಘವೇಶ್ವರರ ಕುರಿತಾಗಿ ಗೌರವ, ಮೆಚ್ಚುಗೆ ಇದ್ದಿದ್ದು ಸ್ಪಷ್ಟವಾಗಿತ್ತು ಅಂತ.
ಆದರೆ ಅಂದು ವಿರೋಧಿ ಸಭೆಯಲ್ಲಿ ಗೋಕರ್ಣಕ್ಕೆ ಕಲಿ ಪ್ರವೇಶವಾಯಿತು ಅಂತ ಹೇಳಿದರು. ಈಗ ನೀವು ಹೇಳುತ್ತಿದ್ದೀರಾ ಅವರಿಗೆ ಗೌರವ ಲಂಡು ಲಸ್ಕೆಯಿದೆ ಅಂತ. ನಾವೇನು ಇದನ್ನು ನಂಬಲು ಹುಚ್ಚರೇ? ಅಂದು ಇರದ ಗೌರವ, ಮೆಚ್ಚುಗೆ ಇಂದು ಬಂದಿದ್ದು ಹೇಗೆ? ತಮ್ಮ ಬೇಳೆ ಬೇಯೋದಿಲ್ಲ ಅಂತನಾ? ಸ್ವರ್ಣವಲ್ಲಿಯವರು ಇಂದಿನ ರಾಜಕಾರಣಿಗಳ ರೀತಿ ತಮ್ಮ ಮಾತನ್ನೂ ಬದಲಾಯಿಸುತ್ತಾರಾ?

>ಗೋಕರ್ಣ ಹಸ್ತಾಂತರ ವಿವಾದಕ್ಕೆ ತೆರೆ ಎಳೆಯಲು ಶೃಂಗೇರಿ ಶ್ರೀಗಳ ಮಾರ್ಗದರ್ಶನ ಪಡೆಯಬೇಕು.
..ಎಲ್ಲಾ ಓಕೇ... ಆದ್ರೆ ಶೃಂಗೇರಿಯವರು ಯಾಕೆ ???? ತಗಳಪ್ಪ..ಇವ್ರೂ ಸ್ಟೇಜಿನ ಹಿಂದೆ ಇದ್ದಾರೆ ಅಂತ ಆಯ್ತು. ಸೂತ್ರದಾರನ ತರ.
ಶೃಂಗೇರಿಯವರು ಸ್ವರ್ಣವಲ್ಲಿಯವರೂ ಬಹಳ ಹತ್ತಿರ ಅಂತ ಎಲ್ಲರಿಗೂ ಗೊತ್ತು. ಇಬ್ಬರೂ ಸೇರಿ ರಾಘವೇಶ್ವರರನ್ನು ಮಟ್ಟ ಹಾಕೋ ಪ್ಲಾನಾ ಸ್ವಾಮಿ ಇದು? ಇಲ್ಲಿಯವರೆಗೂ ಎನೂ ಹೇಳದ ಶೃಂಗೇರಿಯವರನ್ನು ಇಲ್ಲಿಗೆ ಎಳೆಯೋದು ಯಾಕೆ ಅಂತ.

>ಆದರೆ, ನಮ್ಮ ದೃಷ್ಟಿಯಲ್ಲಿ ಆ ದಾಖಲೆಗಳು ಅಷ್ಟು ಗಟ್ಟಿಯಾಗಿವೆ ಎನ್ನಿಸುವುದಿಲ್ಲ
ಹಾಗಾದರೆ ಇವರು ತಮ್ಮ ದೂರದೃಷ್ಟಿಯನ್ನು ಬಿಟ್ಟು ನೋಡಿದ್ದಾರೆ ಅಂತ ಆಯ್ತು. ನಿಮಗೆ ಒಂದು ವಿಷಯ ಗೊತ್ತಿಲ್ಲ ಅನ್ನಿಸೊತ್ತೆ. ಹಸ್ತಾಂತರ ತಡೆಯಲು ಸರಕಾರದ ಮೇಲೆ ಬಹಳ ಒತ್ತಡ ಹಾಕಲಾಗಿತ್ತು. ಅದರ ಹಿಂದೆ ಕೆಲವು ಸ್ವಾಮಿಗಳು ಇದ್ದರು. ಆದರೂ ಸರಕಾರ ಹಸ್ತಾಂತರ ಮಾಡಿತು. ಸುಮ್ ಸುಮ್ಮನೇ ಮಾಡ್ಲಿಲ್ಲ. ದಾಖಲೆ ಪರಿಶೀಲಿಸಿ ಮಾಡಿತು

>ಮಹಾಬಲೇಶ್ವರ ದೇವರನ್ನು ಪೂಜಿಸಲು ರಾಮಚಂದ್ರಾಪುರ ಮಠದ ಅನುಮತಿಗೆ ಕಾಯುವ ಸನ್ನಿವೇಶ ಎದುರಾಗುವಂತಾಗಿದೆ.
ಶ್ರೀ ರಾಘವೇಶ್ವರರು ಸಾರಿ ಸಾರಿ ಹೇಳಿದ್ದಾರೆ "ಗೋಕರ್ಣಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಯತಿಗಳು ಬಂದರೆ ಅವರನ್ನು ವೇದ ಘೋಷಗಳಿಂದ ಸ್ವಾಗತಿಸಲಾಗುವುದು ಅಂತ." ಎಷ್ಟು ಸಲ ಹೇಳಿದರೂ ನಾಯಿ ಬಾಲ ಡೊಂಕು ಅನ್ನೋ ಹಾಗೆ ನೀವು ಮತ್ತು ನಿಮ್ಮ ಪಂಗಡ ಅದನ್ನೇ ಹೇಳ್ತಾಯಿದ್ದೀರ. ಹೇಳಿದ್ದು ಹೇಳೋ ಕಿಸ್ಬ್ಯಾಯಿ ದಾಸ ಅನ್ನೋ ಹಾಗೆ. ಸ್ವರ್ಣವಲ್ಲಿಯವರು ಒಮ್ಮೆ ಅಲ್ಲಿಗೆ ಬರಲಿ. ಅವರಿಗೆ ಯಾವ ರೀತಿ ಸ್ವಾಗತ ಸಿಗತ್ತೆ ಅಂತ ನೋಡಿ ಆಮೇಲೆ ಮಾತನಾಡಲಿ. ಸುಮ್ಮನೆ ಮನಸ್ಸಲ್ಲಿ ಕಲ್ಪನೆ ಮಾಡಿಕೊಂಡು ಮಾತನಾಡುವುದು ಬೇಡ.

>ಸ್ವರ್ಣವಲ್ಲೀ ಮಠದ ಮಹಾಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ, ನಿರ್ಣಯಗಳನ್ನು ಆಧರಿಸಿ ಸರಕಾರವೇ ಇದಕ್ಕೊಂದು ಪರಿಹಾರ ಸೂತ್ರ ಕಂಡು ಹಡಿಯಬೇಕು.
ಅದೇನು ನೀವು ಅಥವಾ ಸ್ವರ್ಣವಲ್ಲಿ ಮಠದ ಪರಿಹಾರ ಸೂತ್ರ ಅಂತ ನಮಗೂ ಹೇಳಿ. ಇಲ್ಲಿ ಚರ್ಚಿತವಾಗಲಿ.

>ಸ್ವರ್ಣವಲ್ಲೀ ಮಹಾಸಭೆಯಲ್ಲಿ ಗೋಕರ್ಣ ಹಸ್ತಾಂತರ ವಿರುದ್ಧ ನಾವು ಹೋರಾಡುವುದಾಗಿ ಹೇಳಿರುವುದಾಗಿ ಪತ್ರಿಕೆಗಳಲ್ಲಿ ತಪ್ಪು ಅಭಿಪ್ರಾಯ ಬಂದಿದೆ.
ಎಲ್ಲ ಆದಮೇಲೆ ಈಗ ನಾವೇನು ಮಾಡಿಲ್ಲ ಅನ್ನುತ್ತಿದ್ದಾರೆ. ಮಾತೇ ಮುತ್ತು..ಮಾತೇ ಮೃತ್ಯು. ಮಾತನ್ನು ಆಡೋವಾಗ ಯೋಚಿಸಿ ಮಾತನ್ನಾಡಬೇಕು. ನಾವು ಯಾರ ಮಾತನ್ನು ನಂಬುವುದು ಈಗ. ಮಾಧ್ಯಮವೋ ಅಥವಾ ಸ್ವರ್ಣವಲ್ಲಿಯ ಶ್ರೀಗಳ ಮಾತೋ..

NiTiN Muttige said...

ಇಲ್ಲಿ ಮತ್ತೊಂದು ವಿಷಯ ಅಂದರೆ, ಅಷ್ಟಕ್ಕೂ ಸ್ವರ್ಣವಲ್ಲಿಯವರು, ಪರಿಹಾರ ಸೂತ್ರ ಯಾಕೆ ಕೊಡಬೇಕು,?
ಅವರ ಪರಿಹಾರ ಸೂತ್ರವನ್ನು ಯಾಕೆ ಸ್ವೀಕರಿಸ ಬೇಕು? ಅವರು ಪರಿಹಾರ ಸೂತ್ರ ನೀಡುವ ಮೊದಲು ತಾವು ಏನೇನು ಮಾಡಿದ್ದೀವಿ ಅಂಥ ಮನಸ್ಸನ್ನು ಕೇಳಿಕೊಳ್ಳಲಿ. ಇವಾಗ ಪರಿಹಾರ ಸೂತ್ರ ನೀಡುವ ಅವರಿಗೆ ಇ ಮೊದಲು ಗೋಕರ್ಣ ಅಷ್ಟು ಹತ್ತಿರ ಆಗಿದ್ದರೆ, ಯಾಕೆ ಅಭಿವ್ರದ್ದಿ ಗೆ ಪರಿಹಾರ ಕಂಡು ಹಿಡಿಯಲಿಲ್ಲ. ರಾಮಚಂದ್ರಾಪುರ ಮಠಕ್ಕೆ ಬಂದಾಕ್ಷಣ ನಿದ್ರೆ ಯಿಂದ ಎದ್ದ ಅವರು ಇನ್ನು ಎಂಥ ಪರಿಹಾರ ಕೊಡ ಬಹುದು?? ಅದನ್ನು ಮಾತ್ರ ಎಲ್ಲೂ ಹೇಳುತ್ತಿಲ್ಲ!!!