Saturday, September 20, 2008

ಸ್ವರ್ಣವಲ್ಲಿ ಶ್ರೀಗಳೇ, ಇದು ಹೀಗೇಕೆ ?

ಎಂದಿನಂತೆಯೀ ಕೆಲ ಮಾದ್ಯಮಗಳು ಗೋಕರ್ಣ ದೇಗುಲ ಹಸ್ತಾಂತರ ವಿಚಾರವನ್ನು ‘ವಿವಾದ’ ಮಾಡಿವೆ. ಸಮಾಜಕ್ಕೆ ಸನ್ಮಾರ್ಗ ತೋರಬೇಕಿದ್ದ ಧರ್ಮ ಪೀಠಗಳು ಇದರ ಕಿಡಿ ಹೊತ್ತಿಸಿದವು. ತಮ್ಮ ಕೀಳು ಅಭಿರುಚಿಯ ಅಭಿವ್ಯಕ್ತಿಗೆ ಈ ವಿಷಯವನ್ನು ಕೆಲ ಮಾದ್ಯಮದ ಮಂದಿ ಅದರಲ್ಲೂ ಎಲೆಕ್ಟ್ರಾನಿಕ್ಸ್ ಮೀಡಿಯಾದವರು ಆಹಾರ ಮಾಡಿಕೊಂಡ ಪರಿ ನೋಡಿದಾಗ ನಮ್ಮ ಭಾರತೀಯ ಮಾಧ್ಯಮ
ಎತ್ತ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಬಗೆಗಿನ ಚರ್ಚೆ ಬೇರೆಯದೇ ಆದ ಅಧ್ಯಾಯ. ಅದು ಒತ್ತೊಟ್ಟಿಗಿರಲಿ.

ಅಸಲಿ ವಿಷಯ ನಮ್ಮ ಪೀಠಾಧಿಪತಿಗಳು ಎನಿಸಿಕೊಂಡವರ ವರ್ತನೆಯ ಬಗೆಗಿನದ್ದು. ಅತ್ಯಂತ ಸಂಕೀರ್ಣ ಸನ್ನಿವೇಶದಲ್ಲಿ ನಾವಿದನ್ನು ಚರ್ಚಿಸಬೇಕಿದೆ. ಒಂದೆಡೆ ಭಾರತೀಯತೆಯ ಮೇಲಿನ ದಾಳಿ ‘ಮತಾಂತರ’ದ ರೂಪದಲ್ಲಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಸಹ ಇದನ್ನು ತಂತಮ್ಮ ಮೂಗಿನ ನೇರಕ್ಕೆ ಬಳಸಿಕೊಳ್ಳಲು ಹವಣಿಸುತ್ತಿವೆ. ಇಂಥ ಸಂದರ್ಭದಲ್ಲಿ ನಮ್ಮ ಪೀಠಾಧೀಶರಲ್ಲಿ ಕಾಣಬೇಕಿದ್ದ ಒಗ್ಗಟ್ಟು (ಮೊದಲು, ಯಾವತ್ತು ಇತ್ತು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು) ಗೋಕರ್ಣದಂಥ ವಿಷಯದಲ್ಲೇ ಮರೆಯಾಗಿರುವುದು ಖಂಡಿತಾ ಅನಪೇಕ್ಷಣೀಯ. ಗೊಕರ್ಣ ದೇಗುಲ ಶ್ರೀ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರವಾಗುತ್ತಿದ್ದಂತೆಯೇ ನಾಡಿನ ಎಲ್ಲ ಮಠಾಧೀಶರು ಇದನ್ನು ಸ್ವಾಗತಿಸುತ್ತಾರೆಂದೇ ಜನತೆ ಭಾವಿಸಿತ್ತು. ಶಂಕರಾಚಾರ್ಯರಂತೂ ಎಲ್ಲರೂ ಶ್ರೀ ರಾಘವೇಶ್ವರರ ಜತೆಗೆ ನಿಲ್ಲುತ್ತಾರೆಂದು ನಿರೀಕ್ಷಿಸಲಾಗಿತ್ತು. ಇನ್ನು ಹವ್ಯಕ ಪೀಠಗಳಲ್ಲೇ ಒಂದಾದ ಸ್ವರ್ಣವಲ್ಲಿ ಶ್ರೀಗಳಂತೂ ಇದನ್ನು ವಿರೋಧಿಸುತ್ತಾರೆಂಬುದನ್ನು ಕನಸು ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ.
ದುರಂತವೆಂದರೆ ಆದದ್ದೇ ಬೇರೆ. ಕೆಲವರಷ್ಟೇ ಸ್ವಾಗತಿಸಿದರು. ಬಹುತೇಕ ಪೀಠಾಧಿಪತಿಗಳು ಪ್ರತಿಕ್ರಿಯೆಯ ಗೋಜಿಗೇ ಹೋಗಲಿಲ್ಲ. ಧರ್ಮಾಧಿಕಾರಿಗಳೆನಿಸಿಕೊಂಡವರು ಮುಗುಮ್ಮಾಗುಳಿದರು. ಇನ್ನು ಕೆಲವರು ಆರಂಭದಲ್ಲಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದರೂ ನಂತರದ ದಿನಗಳಲ್ಲಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ಇನ್ನೂ ಅಚ್ಚರಿಯ ಸಂಗತಿಯೆಂದರೆ ಕೆಲ ಪೀಠಾಧಿಪತಿಗಳಂತೂ ತೊಡೆತಟ್ಟಿ ನಿಂತಂತೆ ಮಾತನಾಡುತ್ತಿದ್ದಾರೆ !

ಇದು ಹೀಗೇಕೆ ? ವಿರೋಧಕ್ಕೆ ಕಾರಣವಾದರೂ ಏನು ? ದ್ವೇಶವೇ ? ಮತ್ಸರವೇ ? ಅಸೂಯೆಯೇ ? ಬಲ ಪ್ರದರ್ಶನವೇ ? ಪೈಪೋಟಿಯೇ ? ....ಅದೂ ಎಲ್ಲ ರಾಗ ದ್ವೇಷಗಳಿಂದ ಅತೀತರಾದ ಸಂನ್ಯಾಸಿಗಳಲ್ಲಿ ! ವಿಪರ್‍ಯಾಸವೆಂದರೆ ಇದೇ ಏನು ?
ಗೋಕರ್ಣದಲ್ಲಿ ಒಂದಷ್ಟು ಅರ್ಚಕರು, ಸ್ಥಳೀಯ ಬೆರಳೆಣಿಕೆಯ ಮಂದಿ, ಹಿಂದೆ ಆಡಳಿತದಲ್ಲಿದ್ದವರ ಕಡೆಯವರು ವಿರೋಧಿಸುವುದಕ್ಕೆ ಅವರದ್ದೇ ಆದ ಕಾರಣಗಳಿರಬಹುದು. ಗೋಕರ್ಣದ ಇಂದಿನ ಪರಿಸ್ಥಿತಿ ಬದಲಾಗುವುದು ಅಂಥವರಿಗೆ ಬೇಕಿಲ್ಲ. ಅನಾಯಾಸವಾಗಿ ಕೂಡಿ ಬರುತ್ತಿದ್ದ ಹಲವು ಲಾಭಗಳನ್ನು ಕಳೆದುಕೊಳ್ಳಲು ಅವರು ಸಿದ್ಧರಿಲ್ಲ. ಆದರೆ ಧರ್ಮಧಿಪತಿಗಳೆನಿಸಿಕೊಂಡವರ ವಿರೋಧ ಏಕೆ ?

ವಿರೋಧಿಗಳೆಂದು ಗುರಿತಿಸಿಕೊಂಡ ಪೂಜ್ಯರನ್ನೆಲ್ಲ ಒಂದು ಪ್ರಶ್ನೆ ಕೇಳಬಹುದಾದರೆ ಇಂಥದ್ದೇ ಒಂದು ಕೆಚ್ಚನ್ನು ಗೋಕರ್ಣದ ಅಭಿವೃದ್ಧಿಯ ಬಗೆಗೆ ಈವರೆಗೆ ತೋರಿದ್ದಿದೆಯೇ ? ಯಾಕೆ ಅದು ಅಗತ್ಯವೆಂದು ಅನ್ನಿಸಲಿಲ್ಲವೇ ? ಎಲ್ಲರಿಗೆ ಸೇರಬೇಕಾದ ದೇಗುಲ ಯಾವುದೇ ಒಂದು ಮಠಕ್ಕೆ ಹಸ್ತಾಂತಗೊಳ್ಳುತ್ತಿದೆ ಎಂದು ಆಕ್ಷೇಪವೆತ್ತುತ್ತಿರುವ ತಾವು, ಈವರೆಗೆ ದುಂದುಕೋರರ, ದಂಧೆಕೋರರ ಕೈಗೆ ಗೋಕರ್ಣ ಕ್ಷಣಕ್ಷಣವೂ ಹಸ್ತಾಂತರಗೊಳ್ಳುತ್ತಿದ್ದಾಗ ಅದನ್ನು ತಡೆದು ರಕ್ಷಿಸಬೇಕೆಂದು ಅನ್ನಿಸಿಯೇ ಇರಲಿಲ್ಲವೇ ? ಎಲ್ಲಕ್ಕಿಂಥ ಹೆಚ್ಚಾಗಿ ಹಿಂದು ಸಮಾಜವನ್ನು, ಸಮುದಾಯವನ್ನು ಸಂಘಟಿಸಿ ಭಾರತೀಯ ಧರ್ಮ ರಕ್ಷಣೆ ಮಾಡಬೇಕಿದ್ದ ಉದ್ದೇಶಕ್ಕೆ ನಿಯುಕ್ತಿಗೊಂಡಿರುವ ಸಂತರು ತಾವೇ ಸ್ವತಃ ಲೌಖಿಕರಂತೆ ಸಂಘರ್ಷಕ್ಕಿಳಿದರೆ ಅದೇ ವಿಘಟನೆಗೆ ಮೂಲ ಕಾರಣವಾದೀತು ಎಂಬ ಕನಿಷ್ಠ ವಿಚಾರವೂ ಅವರಲ್ಲಿ ಸುಳಿದು ಹೋಗದುಳಿಯಿತೇ ?

ಹಿಂದೆಲ್ಲ ಮಠ ಮಾನ್ಯಗಳಿಗೆ ಬೇರೆ ಬೇರೆ ಸರಕಾರಗಳ ಅವಧಿಯಲ್ಲಿ ಬೇರೆ ಬೇರೆ ರೀತಿಯ ‘ಹಸ್ತಾಂತರ’ಗಳಾಗಿರುವ ಉದಾಹರಣೆಗಳನ್ನು ಮತ್ತೆ ನೆನೆಪಿಸಿಕೊಳ್ಳುವ ಅಗತ್ಯವಿದೆಯೇ ? ಆಗೆಲ್ಲ ಇದೇ ತೆರನಾದ ವಿರೋಧ ಉದ್ಭವಿಸಿತ್ತೇ ? ಇಲ್ಲವೆಂದಾದರೆ ಈಗ ಮಾತ್ರ ಏಕೆ ? ಮಠಾಧಿಪತಿಗಳಲ್ಲೂ ಮತ್ಸರವೇ ?

ಅಷ್ಟಕ್ಕೂ ಹಾಗಾಗಿ ಬಿಡುತ್ತದೆ, ಹೀಗಾಗಿ ಬಿಡುತ್ತದೆ ಎಂದೆಲ್ಲ ಕಾಲ್ಪನಿಕ ಆತಂಕ ಮುಂದೊಡ್ಡುವ ಅಗತ್ಯವಾದರೂ ಏಕೆ ? ಮತಾಂತರದ ದೌರ್ಜನ್ಯ ನಿರಂತರ ಎನ್ನವಂತಾಗಿರುವಾಗ, ಅಲ್ಪಸಂಖ್ಯಾತರನೆನ್ನುವವರನ್ನು ‘ಬಂಧುಗಳು’ ಎಂಬ ಸೋಗಲಾಡಿ ಸಂಬಂಧ ಸೂಚಕ ಪದದಲ್ಲೇ ಗುರುತಿಸಬೇಕು; ಅದಿಲ್ಲದಿದ್ದರೆ ಅಪಚಾರ ಎಂಬ ಮನೋಭಾವವನ್ನು ನಿರಂತರ ಬಿತ್ತಿ ರಾಜಕೀಯ ಲಾಭದ ಫಸಲು ಪಡೆಯಲು ಹೊರಟಿರುವಾಗ ಒಮ್ಮೆಯೂ ಒಂದಾಗಿ ನಿಂತು ಸನಾತನ ಧರ್ಮವನ್ನು ರಕ್ಷಿಸಲು ‘ಬೀದಿಗಿಳಿಯಬೇಕು’ ಎಂಬ ಭಾವ ಮೂಡಿಲ್ಲವೇ ?

ಸ್ವಾಮೀಜಿಗಳೇ, ಸಮಾಜದಲ್ಲಿ ತಮ್ಮಗಳ ಬಗ್ಗೆ ಎಂಥ ಭಾವನೆಗಳು ಮೂಡಿವೆ ಎಂಬುದನ್ನು ತುಸು ಪೀಠದಿಂದ ಕೆಲಗಿಳಿದು ಬಂದು ನೋಡಿ. ನಿಮ್ಮ ಸುತ್ತಲೂ ಕೋಟೆ ಕಟ್ಟಿಕೊಂಡು ಸ್ವಲಾಭಕ್ಕಾಗಿ ನಿಂತಿರುವವರನ್ನು ಪಕ್ಕಕ್ಕೆ ಸರಿಸಿ ಇಣುಕಿ. ಬಹುಶಃ ವಿದ್ಯಾವಂತರೆನಿಸಿಕೊಂಡವರು ಇಂದಿನ ಮಠಗಳ ಬಗ್ಗೆ ಮಾತನಾಡಲೂ ಹೇಸುತ್ತಿದ್ದಾರೆ. ನಿರೋದ್ಯೋಗಿಗಳ ಅಂತಿಮ ತಾಣ ಮಠಗಳು ಎಂಬುದು ನಿತ್ಯ ಭಾವವಾಗಿದೆ. ಸುಲಭದಲ್ಲಿ, ಅನಾಯಾಸವಾಗಿ ಹಣಮಾಡುವ ಮಾರ್ಗ ಎಂದರೆ ಪೀಠಾರೋಹಣ ಮಾಡುವುದು ಎಂಬ ವ್ಯಂಗ್ಯ ಸಮಾಜದಲ್ಲಿ ಮನೆ ಮಾಡಿದೆ. ಕಾವಿಯ ಮರೆಯಲ್ಲಿ ಎಲ್ಲ ಸುಖಗಳನ್ನೂ ಅನುಭವಿಸುವ, ಹಾಗಿದ್ದೂ ಸಂಪನ್ನತೆಯ ಮುಖವಾಡ ತೊಟ್ಟು ಮೆರೆಯುವ ಏಕೈಕ ಸೌಲಭ್ಯವಿದ್ದರೆ ಅದು ಸಂನ್ಯಾಸದಲ್ಲಿ ಮಾತ್ರ ಎಂಬ ಕುಹಕ ಬಹಿರಂಗವಾಗಿಯೇ ಕೇಳಿಬರುತ್ತಿದೆ.

ಇಷ್ಟಾದರೂ, ಇಂಥ ಕ್ಷುಲ್ಲಕ ವಿಚಾರಗಳನ್ನು ಬದಿಗಿಟ್ಟು ಮೌಲ್ಯಗಳ ಪುನರ್‌ಸ್ಥಾಪನೆಯತ್ತ ಹೊರಳಬೇಕೆನಿಸದಿರುವುದು ಖಂಡಿತಾ ಧರ್ಮದ ಅವನತಿಯ ಭಾಗ. ಇಂದು ಚಲನ ಚಿತ್ರಗಳಲ್ಲಿ ಬಹುಶಃ ಪೊಲೀಸ್ ಪೇದೆ, ರಾಜಕಾರಣಿಯ ಬಳಿಕ ಅತಿ ಹೆಚ್ಚು ವ್ಯಂಗ್ಯಕ್ಕೆ ಒಳಗಾಗುತ್ತಿದ್ದರೆ ಅದು ಮಠಾಧೀಶರೇ. ಅಂಥ ಸನ್ನಿವೇಶದಲ್ಲಿ ಸ್ವರ್ಣವಳ್ಳಿ ಶ್ರೀಗಳಂಥ ವಿವೇಚನಾಶೀಲ ಸಂನ್ಯಾಸಿಯೊಬ್ಬರು ಗೋಕರ್ಣ ವಿಚಾರದಲ್ಲಿ ವಿರೋಧಿಗಳ ಸಮಾವೇಶ ನಡೆಸುತ್ತಾರೆ. ಅಂಥ ಸಭೆಯಲ್ಲಿ ತಮ್ಮಂಥದೇ ಇನ್ನೊಂದು ಉನ್ನತ ಸ್ಥಾನದಲ್ಲಿರುವವರನ್ನು ‘ಕಲಿ’ ಎಂದು ಸಂಬೋಧಿಸುತ್ತಾರೆ ಎಂದರೆ.... ಪೂಜ್ಯ ಗುರುಗಳೇ , ಅತ್ಯಂತ ವಿನೀತನಾಗಿ ತಮ್ಮಲ್ಲಿ ಪ್ರಶ್ನಿಸುತ್ತೇನೆ ತಮ್ಮಂಥವರಿಗೆ ಇದು ಉಚಿತವೇ ? ಪರಿಸರ ಉಳಿವಿಗೆ ಬೃಹತ್ ಹೋರಾಟ ಸಂಘಟಿಸಿ ವಿಭಿನ್ನ ಛಾಪೊಂದನ್ನು ಮೂಡಿಸಿದ್ದ, ಆ ಮೂಲಕ ಚಿಂತನಶೀಲ ಪೀಠಾಧಿಪತಿಗಳು ಎಂದೇ ಮಾನ್ಯರಾಗಿದ್ದ ತಾವು ಈ ಸಮಾಜಕ್ಕೆ ನೀಡಲು ಹೊರಟ ಸಂದೇಶವಾದರೂ ಏನು ? ಭಗವದ್ಗೀತೆಯ ಬಗೆಗಿನ ಜಾಗೃತಿಗೆ ಬಹುದೊಡ್ಡ ಆಂದೋಲನವನ್ನೇ ಹುಟ್ಟುಹಾಕಿ ಹೊರಟಿರುವ ತಾವು ಗೀತಾ ಸಾರವನ್ನೂ ಈ ಮೂಲಕ ಉಪೇಕ್ಷಿಸಿದಿರೇ ?

ಯಾರೋ ಶ್ರಿ ಪ್ರಸನ್ನನಾಥರಂಥವರು ಹುಡುಗಾಟಿಕೆಗೆ ಹೊರಟರೆ ಅದು ದೊಡ್ಡದಲ್ಲ. ಏಕೆಂದರೆ ಪರಮಪೂಜ್ಯ ಆದಿಚುಂಚನಗಿರಿ ಮಠಾಧೀಶ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಕೈ ಮೀರಿ ಅವರು ಅಂಥ ದುಸ್ಸಾಹಸಗಳನ್ನು ಮಾಡುತ್ತಿದ್ದಾರೆ ಎಂಬ ಮನೋಭಾವ ಈಗಾಗಲೇ ನೆಲೆಯೂರಿದೆ. ಅದಿಲ್ಲದಿದ್ದರೆ ಶ್ರೀ ರಾಘವೇಶ್ವರರ ಜತೆಗಿನ ಭೇಟಿಯ ಭಾವಚಿತ್ರ ಪತ್ರಿಕೆಗಳಲ್ಲಿ ಅಚ್ಚಾಗಿದೆ. ಅವರು ಹಸ್ತಾಂತರವನ್ನು ಸ್ವಾಗತಿಸಿದ ಸುದ್ದಿ ಜತೆಯಲ್ಲೇ ಪ್ರಕಟಗೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಪುನರುತ್ಥಾನ ಸಂಕಲ್ಪ ಸಭೆಯ ಆಹ್ವಾನಿತರ ಪಟ್ಟಿಯಲ್ಲಿ ಅವರ ಹೆಸರೂ ಮುದ್ರಣಗೊಂಡಿತ್ತು. ಹೀಗಿದ್ದೂ, ಅವರದೇ ಶಾಖಾ ಮಠದ ಸ್ವಾಮೀಜಿಯಾಗಿ ಪ್ರಸನ್ನನಾಥರು ಸಾಮಾನ್ಯರನ್ನೂ ನಾಚಿಸುವ ರೀತಿಯಲ್ಲಿ ಗೋಕರ್ಣ ವಿಷಯದಲ್ಲಿ ಕದನಕುತೂಹಲಿಯಾಗಿ ವರ್ತಿಸುತ್ತಿದ್ದಾರೆಂದರೆ ಅದು ಪರಿಸ್ಥಿತಿಯ ವಿಕೋಪ. ಆದರೆ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಆ ಮಟ್ಟಕ್ಕೆ ಇಳಿಯುತ್ತಾರೆಂದರೆ ಇದಕ್ಕೇನರ್ಥ ?

ಇಂಥ ಬೆಳವಣಿಗೆಗಳಾಗುತ್ತಿರುವವರೆಗೆ ಮತಾಂತರಿಗಳ ಕಾರ್ಯ ಅಬಾಧಿತ, ರಾಜಕೀಯ ಕುತಂತ್ರಿಗಳ ನೆಮ್ಮದಿ ಸುಸ್ಥಿರ.....ಸ್ವಾಭಿಮಾನ ಮಾತ್ರ ನಮ್ಮ ಪಾಲಿಗೆ ಭಂಗ...ಅಲ್ಲವೇ ?
-ಶ್ರೀವತ್ಸ
(ಶ್ರೀವತ್ಸ ಅವರ ಅಭಿಪ್ರಾಯ )
ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು
media4cow@gmail.com


Website Hit Counters
Web Counters

No comments: