Monday, September 15, 2008

‘ಮಹಾಸಂಕಲ್ಪ’ ದಲ್ಲಿ ಮಿಂದೆದ್ದ ಜನತೆ



ಆತ್ಮಲಿಂಗವೇದಿಕೆ (ಗೋಕರ್ಣ): ಕಳೆದೆರಡು ದಿನಗಳಿಂದ ಕರ್ನಾಟಕ ಕರಾವಳಿಯಲ್ಲಿ ಅರಬ್ಬಿ ಸಮುದ್ರ ಉಕ್ಕಿದೆ. ಆದರೆ ಗೋಕರ್ಣದಲ್ಲಿ ಮಾತ್ರ ಸೋಮವಾರ ಜನಸಾಗರ ಉಕ್ಕಿತ್ತು. ಪ್ರವಾಹೋಪಾದಿಯಲ್ಲಿ ಹರಿದು ಬಂದ ಜನಸಾಗರಕ್ಕೆ ಗೋಕರ್ಣದ ಬೀದಿಗಳು ಸಾಲದೆ ಹೋದವು. ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳಿಗೆ ಸರಕಾರ ಗೋಕರ್ಣವನ್ನು ಹಸ್ತಾಂತರಿಸಿದ ನಂತರ ಶ್ರೀಗಳು ಕರೆದಿದ್ದ ಗೋಕರ್ಣ ಕ್ಷೇತ್ರ ಪುನರುತ್ಥಾನ ಮಹಾಸಂಕಲ್ಪ ಕಾರ್ಯಕ್ರಮ ದಲ್ಲಿ ಮಹಾಸಂಕಲ್ಪ ತೊಡಲು ಸುರಿವ ಮಳೆಯನ್ನೂ ಲೆಕ್ಕಿಸದೆ ಜನ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು. ಒಂದೆಡೆ ಮಹಾಸಂಕಲ್ಪದ ಮೆರವಣಿಗೆ ಗೋಕರ್ಣದ ದೇವಸ್ಥಾನದತ್ತ ಸಾಗುತ್ತಿದ್ದರೆ, ಇನ್ನೊಂದೆಡೆ ಜಡಿ ಮಳೆ ಇವರನ್ನು ನೆನೆಸಿತು. ಆದರೆ ಇವರಲ್ಲ ಅದನ್ನು ಲೆಕ್ಕಿಸದೆ ಗೋಕರ್ಣ ಕ್ಷೇತ್ರದ ಮಹಾ ಸಂಕಲ್ಪದ ದಿವ್ಯ ಮಳೆಯಲ್ಲಿ ಮಿಂದೆದ್ದರು. ಅವರಿಗೆ ಇದ್ದದ್ದು ಗೋಕರ್ಣ ಕ್ಷೇತ್ರ ಎಂಬುದು ದೇಶಕ್ಕೇ ಧಾರ್ಮಿಕ ಪುನರುತ್ಥಾನದ ಕೇಂದ್ರವಾಗಬೇಕು ಎಂಬ ದಿವ್ಯ ಸಂಕಲ್ಪ ಮಾತ್ರ. ಮಹಾಬಲೇಶ್ವರನೇ ಕರೆಸಿದ್ದು... ನಮ್ಮನ್ನು ಗೋಕರ್ಣದ ಮಹಾಬಲೇಶ್ವರನೇ ಕರೆಸಿದ್ದು ಸ್ವಾಮಿ, ನಮ್ಮ ದೇನಿದೆ. ಗೋಕರ್ಣ ಕ್ಷೇತ್ರ ಪುನರುತ್ಥಾನಕ್ಕೆ ರಾಘವೇಶ್ವರ ಶ್ರೀಗಳು ಸಂಕಲ್ಪ ತೊಟ್ಟಿದ್ದಾರೆ. ಗೋ ಯಾತ್ರೆ ಮೂಲಕ ಇಡೀ ವಿಶ್ವಕ್ಕೇ ಧಾರ್ಮಿಕ ಪುನರುತ್ಥಾನದ ಸಂದೇಶ ನೀಡಿರುವವರು ಈಗ ಗೋಕರ್ಣ ಕ್ಷೇತ್ರದ ಪುನರುತ್ಥಾನಕ್ಕೆ ಸಂಕಲ್ಪ ತೊಟ್ಟಿರುವಾಗ ಭಕ್ತಾದಿ ಗಳಾದ ನಾವು ಇದಕ್ಕೆ ಕೈ ಜೋಡಿಸದಿದ್ದರೆ ಹೇಗೆ..? ಗೋಕರ್ಣ ಮಹಾಬಲೇಶ್ವರನ ಭಕ್ತರಾಗಿ ಏನು ಪ್ರಯೋಜನ. ನಮ್ಮಲ್ಲೆಲ್ಲ ಮನೆ ಮನೆಗೆ ಗೋಕರ್ಣ ಮಹಾಬಲೇಶ್ವರನ ಹೆಸರು ಕನಿಷ್ಠ ಎರಡ್ಮೂರು ಹೆಸ್ರು ಇಡ್ತಾರೆ. ಗೋಕರ್ಣ ಮಹಾಬಲೇಶ್ವರ ನಮಗೆ ಅಷ್ಟು ಹತ್ತಿರ. ಹೀಗಿರುವಾಗ ಗೋಕರ್ಣದ ಪುನರುತ್ಥಾನದ ಕೆಲಸ ಮಾಡುವಾಗ ಇದಕ್ಕೆ ಬರದೆ ಇರಲಿಕ್ಕೆ ಆಗ್ತದಾ ಎಂದು ನಾಗೇಶ ಗೌಡ ಕೇಳುತ್ತಾರೆ. ಇದು ಪುಷ್ಪವೃಷ್ಟಿ... ಸ್ವಾಮಿ ಗೋಕರ್ಣ ಮಹಾಬಲೇಶ್ವರ ನೀರಲ್ಲೇ ಇರುವುದು. ಅವನ ತಲೆ ಮೇಲೆ ಸದಾ ನೀರು ಬೀಳುತ್ತಿರಬೇಕು. ಆತನಿಗೆ ಜಲಬೇಕೇಬೇಕು. ಗೋಕರ್ಣ ಕ್ಷೇತ್ರದ ಸಂಕಲ್ಪ ತೊಟ್ಟ ಈ ದಿವಸವೇ ಇಷ್ಟೊಂದು ಜಡಿ ಮಳೆಯಾಗಿರುವುದು, ಇದು ಕೇವಲ ಮಳೆಯಲ್ಲ, ಮಹಾಬಲೇಶ್ವರನ ಅಭಿಷೇಕಕ್ಕೆ ಆದ ಪುಷ್ಪ ವೃಷ್ಟಿ ಇದು. ನಮಗೂ ಪುಷ್ಪ ವೃಷ್ಟಿ ಆದಂತಾ ಯಿತು ಎನ್ನುತ್ತಾರೆ ರಾಮು. ಗೋಕರ್ಣದಲ್ಲಿ ಇತಿಹಾಸ... ಗೋಕರ್ಣ ಕ್ಷೇತ್ರದ ಪುನರುತ್ಥಾನದ ಸಂಕಲ್ಪಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ಜನ ಸೇರಿರುವುದು ನಿಜಕ್ಕೂ ಗೋಕರ್ಣದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ ಎಂದು ಸ್ಥಳೀಕರೊಬ್ಬರು ಅಭಿಪ್ರಾಯಪಡುತ್ತಾರೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಮಳೆ ಬೀಳುತ್ತಿದೆ. ಆದರೂ ನಿರೀಕ್ಷೆಗೆ ಮೀರಿ ಜನ ಬಂದು ಈ ಮಹಾಸಂಕಲ್ಪ ತೊಟ್ಟಿದ್ದಾರೆ ಎನ್ನುತ್ತಾರೆ ಅವರು. ಮಳೆಯಲ್ಲೇ ತೊಯ್ದರು.. ಸಭೆ ಸಂದರ್ಭದಲ್ಲಿ ಜಡಿ ಮಳೆ ಸುರಿಯುತ್ತಿದ್ದರೂ ಜನ ಮಾತ್ರ ಅಲ್ಲಿಂದ ಕದಲಲಿಲ್ಲ. ಕೆಲವರು ಕೊಡೆ ಹಿಡಿದು ರಾತ್ರಿ ೧೦ರ ವರೆಗೂ ಕುಳಿತರೆ, ಇನ್ನು ಕೆಲವರು ಮಳೆಯಲ್ಲಿ ತೊಯ್ದು ಒದ್ದೆ ಬಟ್ಟೆಯಲ್ಲೇ ಕುಳಿತರು. ಅವರೆಲ್ಲರದು ಒಂದೇ ಮಂತ್ರ, ಗೋಕರ್ಣ ಕ್ಷೇತ್ರದ ಅಭಿ ವೃದ್ಧಿ ಮಂತ್ರ, ಒಂದೇ ಸಂಕಲ್ಪ ಅದುವೇ ಗೋಕರ್ಣ ಕ್ಷೇತ್ರದ ಧಾರ್ಮಿಕ ಪುನರುತ್ಥಾನದ ಸಂಕಲ್ಪ. ಇತಿಹಾಸ ನಿರ್ಮಿಸಿದರು ಶ್ರೀ ಕ್ಷೇತ್ರ ಗೋಕರ್ಣ ಪುನರುತ್ಥಾನ ಮಹಾಸಂಕಲ್ಪಕ್ಕೆ ಜನ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿ ಇತಿಹಾಸ ನಿರ್ಮಿಸಿದರು. ಬಂದ ಎಲ್ಲ ಭಕ್ತ ಸಮೂಹಕ್ಕೆ ಪ್ರೀತಿ ಪೂರಕ ಆತಿಥ, ಸಲಹೆ, ಮಾರ್ಗ ದರ್ಶನ ಲಭ್ಯವಿತ್ತು. ಆತ್ಮಲಿಂಗ ವೇದಿಕೆಗೆ ಜನಪ್ರವಾಹವೇ ಹರಿದು ಬಂದರೂ ಗದ್ದಲ, ಗಲಾಟೆ, ಗಲೀಜು ಎಂಬುದು ಕಿಂಚಿತ್ತೂ ಇರಲಿಲ್ಲ. ಕುಡಿಯುವ ನೀರು, ಪಾನೀಯ, ಊಟ, ಉಪಹಾರ, ಸಂಚಾರ ನಿಯಂತ್ರಣ, ಸಂಚಾರಿ ಆಸ್ಪತ್ರೆ, ಹೀಗೆ ಎಲ್ಲದರಲ್ಲೂ ಅಚ್ಚುಕಟ್ಟು ಎದ್ದು ಕಾಣುತ್ತಿತ್ತು. ಆಗಾಗ ಸುರಿಯುತ್ತಿದ್ದ ಜಡಿ ಮಳೆಯ ಮಧ್ಯೆಯೂ ಕಾರ್ಯಕರ್ತರು ವ್ಯವಸ್ಥೆಯಲ್ಲಿ ಕಿಂಚಿತ್ತೂ ಲೋಪವಾಗದಂತೆ ನೋಡಿ ಕೊಂಡರು. ಗೋಕರ್ಣದ ಇತಿಹಾವನ್ನು ಬಿಂಬಿಸುವ ದೃಶ್ಯವನ್ನೊಳಗೊಂಡ ಸುಂದರ ವೇದಿಕೆ ಸಭೆಗೆ ಮತ್ತಷ್ಟು ಮೆರುಗು ನೀಡಿತು.

No comments: