Saturday, September 27, 2008

ಶ್ರೀಮಠ ಮತ್ತು ಶಿಬಿರ

ನುಡಿಚಿತ್ರ ಅಂದರೇನು ಅಂತ ನನಗೆ ಗೊತ್ತಿರಲಿಲ್ಲ. ನನಗೇನು ಅಂದು ಅಲ್ಲಿ ಸೇರಿದ್ದ ಘಟಾನುಗಟಿ ಪತ್ರಕರ್ತರಿಗೂ ತಿಳಿದಿರಲಿಲ್ಲ.ದಿನಾಂಕ ೧೩-೦೮-೨೦೦೮ ರಂದು ಶ್ರೀ ಮಠದ ವತಿಯಿಂದ ಬೆಂಗಳೂರಿನ ಗಿರಿನಗರದ ಸಮೀಪ ಶ್ರೀಮಾತಾ ಕಲ್ಯಾಣ ಮಂಟಪದಲ್ಲಿ ಗೋವಿಗಾಗಿ ಮಾದ್ಯಮ ಎಂಬ ತರಬೇತಿ ಶಿಬಿರದಲ್ಲಿ ಖ್ಯಾತ ಬರಹಗಾರ ಆನಂದ್ ವಿವರವಾಗಿ ಹೇಳಿದಮೇಲೆ ಅರಿವಾಗಿದ್ದು ನಮಗೆಲ್ಲ. ನೀರುನೆರಳಿನ ರಾಧಾಕೃಷ್ಣ ಭಡ್ತಿ ಮಠದ ಪರವಾಗಿ ಶಿಬಿರವನ್ನು ಆಯೋಜಿಸಿದ್ದರು.ಪ್ರತೀ ಸೀಮೆಯಿಂದ ಕನಿಷ್ಠ ಇಬ್ಬರು ಬರುವಂತೆ ಮಠದ ಪರವಾಗಿ ಭಾರತೀಶ ಆಹ್ವಾನ ಕಳುಹಿಸಿದ್ದರು. ಆದರೆ ಜನರು ಈ ತರಬೇತಿ ಶಿಬಿರವನ್ನು ಬಳಸಿಕೊಳ್ಳುವಲ್ಲಿ ವಿಫಲವಾದರು. ಇರಲಿ ಬಂದಷ್ಟು ಜನರು ಬಳಸಿಕೊಂಡರೆ ಸಾಕಲ್ಲವೇ ಈಗ ವಿಷಯಕ್ಕೆ ಬರೊಣ.

ಶ್ರೀಯುತ ಆನಂದ ನಮಗೆಲ್ಲಾ ಒಂದು ಪ್ರಶ್ನೆ ಎಸೆದರು. ಅದು ಹೀಗಿತ್ತು. " ಜೋಗದಿಂದ ಸಾಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಳು" ಎಂಬುದನ್ನು ವರದಿ ಮಾಡಿ" ಎಂದು. ಸರಿ ನಾವೆಲ್ಲಾ ಪಟಪಟನೆ ವರದಿ ಬರೆದಿದ್ದೇ ಬರೆದಿದ್ದು. ಬರೆದಾದಮೇಲೆ ಓದಲು ಒಬ್ಬೊಬ್ಬರನ್ನೇ ಕೇಳಿದರು. ಎಲ್ಲರೂ ಯಥಾಪ್ರಕಾರ ನಿತ್ಯ ಪತ್ರಿಕೆಗಳಲ್ಲಿ ಬರುವಂತೆ ವರದಿ ಮಾಡಿದರು. ಆದರೆ ಆನಂದ್ ರವರಿಗೆ ತೃಪ್ತಿಯಾಗಲಿಲ್ಲ. ಕೆಲವರಂತೂ ಪುಟಗಟ್ಟಲೆ ವರದಿ ಮಾಡಿದ್ದರು ಆದರೂ ಅವರಿಗೆ ತೃಪ್ತಿ ಇಲ್ಲ. ಕೊನೆಯದಾಗಿ ಕುಮಾರಿಯಕ್ಕ ಎಂಬ ನಲವತ್ತೈದು ವರ್ಷದ (ವಿಜಯಕರ್ನಾಟಕ ಪತ್ರಿಕೆಯ ತಾಳಗುಪ್ಪ ವರದಿಗಾರನ ಪತ್ನಿ) ಆರಂಭದ ಒಂದೇ ಒಂದು ಸಾಲು ಹೇಳುತ್ತಿದ್ದಂತೆ ಭೇಷ್ ಎಂದರು. ಅದೇ ನುಡಿಚಿತ್ರ ಎಂದರು. ಅದು ಹೀಗಿತ್ತು " ಹೆರಿಗೆ ಆಸ್ಪತ್ರೆಯಾದ ಬಸ್". ಈಗ ನಿಮಗೂ ಅರ್ಥವಾಗಿರಬೇಕು ನುಡಿಚಿತ್ರವೆಂದರೆ. ಹೌದು ನಮ್ಮ ಸುತ್ತಮುತ್ತ ನಡೆಯುವ ವಿಷಯಗಳನ್ನು ವಿಶೇಷವಾಗಿ ಹೇಳುವ ಹಾಗೂ ಅರ್ಥಪೂರ್ಣ ಸಾಲುಗಳಲ್ಲಿ ಹೇಳುವ ಮತ್ತು ನುಡಿಗಳಲ್ಲಿ ಚಿತ್ರವನ್ನು ಕಟ್ಟಿಕೊಡುವ ವರದಿಗಳಿಗೆ ನುಡಿಚಿತ್ರ ಎನ್ನುತ್ತಾರೆ. ಇದೊಂದು ಉದಾಹರಣೆ. ನಂತರ ಆನಂದ ಶಿಬಿರಾರ್ಥಿಗಳಿಗೆ ಉತ್ತಮವಾಗಿ ಬರೆಯುವ ವಿಧಾನಗಳನ್ನು ಹೇಳಿದರು. ಭಡ್ತಿಯವರು ಪತ್ರಕರ್ತನ ನಡಾವಳಿಕೆ ನೀತಿ ಶ್ರದ್ಧೆ ಯ ಕುರಿತು ಉತ್ತಮವಾಗಿ ಭಾಷಣ ಮಾಡಿದರು.ದಟ್ಸ್ ಕನ್ನಡದ ವರದಿಗಾರರು, ಮಂಗಳ ಪತ್ರಿಕೆಯ ಸಂಪಾದಕರು ಬರಹಗಳ ಕುರಿತು ಒಳ್ಳೆಯ ಮಾತನ್ನಾಡಿದರು.


ಇಂಥಹ ಉತ್ತಮ ಕೆಲಸಗಳು ಶ್ರೀಮಠದಿಂದ ನಡೆಯುತ್ತವೆ. ಆದರೆ ಜನರು ಅದೇಕೋ ಬಳಸಿಕೊಳ್ಳುವುದಿಲ್ಲ. ಇಂದು ಪತ್ರಿಕೋದ್ಯಮ ವಿಚಿತ್ರ ರೀತಿಯಲ್ಲಿ ಬೆಳೆಯುತ್ತಿದೆ. ತತ್ವ ಸಿದ್ದಾಂತಗಳೆಲ್ಲಾ ಗಾಳಿಗೆ ತೂರಿದ ದಿವಸಗಳು ಇವು. ಒಂದಿಷ್ಟು ಒಳ್ಳೆಯ ಬರಹಗಳು ಬರಬೇಕೆಂದರೆ ಇಂಥಹ ಶಿಬಿರಗಳು ಹೆಚ್ಚಾಗಬೇಕು. ಶಿಬಿರಗಳು ಹೆಚ್ಚಾಗಬೇಕೆಂದರೆ ಜನ ಬೆಂಬಲ ಸಿಗಬೇಕು. ಜನರು ಹೆಚ್ಚು ಬಳಸಿಕೊಂಡು ಉತ್ತಮ ಲೇಖಕರು ಹೊರಹೊಮ್ಮಲಿ

-ಶಿಬಿರಾರ್ಥಿ

No comments: